26.1 C
Karnataka
Friday, November 22, 2024

ಸರ್ಕಾರಿ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ- ಪಟ್ಲ ಸತೀಶ್ ಶೆಟ್ಟಿ

ಮಂಗಳೂರು : ಸಾಂಸ್ಕೃತಿಕ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡಲು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂದಾಗಿದೆ ಎಂದು ಟ್ರಸ್ಟ್‌ ನ ಸ್ಥಾಪಕಾಧ್ಯಕ್ಷ , ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ” ಈಗಾಗಲೇ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ವೇದಿಕೆ ಒದಗಿಸುವ ಪ್ರಯತ್ನವೂ ನಡೆಯಲಿದೆ ಎಂದರು.
ಈಗಾಗಲೇ ಆಳ್ವಾಸ್ ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ ಯಶಸ್ವಿಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳು ಇರುವುದಿಲ್ಲ. ಅವರಿಗೆ ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಜ್ಞಾನ ಹಾಗೂ ಅಭಿರುಚಿ ಮೂಡಿಸುವುದು ಟ್ರಸ್ಟ್ ನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಹಿರಿಯ ಕಲಾವಿದರ ಪೈಕಿ ಕೆಲವರು ಶಾಲಾ ಶಿಕ್ಷಣ ಪಡೆಯದಿದ್ದರೂ ರಂಗದಲ್ಲಿ ಅದ್ಭುತ ಭಾಷಾ ಪಾಂಡಿತ್ಯ, ವಾಕ್ ಚಾತುರ್ಯದ ಮೂಲಕ ಪ್ರಸಿದ್ಧಿ ಸಂಪಾದಿಸಿದ್ದಾರೆ. ಅದುವೇ ಯಕ್ಷಗಾನದ ಕಲೆಗೆ ಇರುವ ಶಕ್ತಿ. ದಶಕಗಳ ಹಿಂದೆ ಯಕ್ಷಗಾನ ಕಲಾವಿದರು ಕನಿಷ್ಠ ಸಂಬಳ ಪಡೆದು ಮೇಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ತಮ್ಮ ಕುಟುಂಬದ ನಿರ್ವಹಣೆಯ ಜತೆ ಕಲೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಕಲಾವಿದರು ಯಾವುದೇ ತೊಂದರೆ ಗೊಳಗಾದರೆ ಬದುಕು ಸಾಗಿಸುವುದೇ ಕಷ್ಟಕರವಾಗಿತ್ತು ಇಂತಹ ಸ್ಥಿತಿಯನ್ನು ಕಂಡು ಕಲಾವಿದರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆನ್ನುವ ಆಶಯ ಉಂಟಾಯಿತು. ದೇವರ ದಯೆಯಿಂದ ನನ್ನನ್ನು ಪ್ರೀತಿಸುವ ಯಕ್ಷಗಾನ ಕಲೆಯನ್ನು ಗೌರವಿಸುವ ದೊಡ್ಡ ಜನ ಸಮೂಹದ ಬೆಂಬಲ ನನಗೆ ದೊರೆಯಿತು.ಇದರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆ ಮಾಡಲಾಯಿತು ಎಂದು ಅವರು ಹೇಳಿದರು.
ಕಳೆದ ಎಂಟು ವರ್ಷ ಗಳಲ್ಲಿ ಟ್ರಸ್ಟ್ ಮೂಲಕ 12 ಕೋಟಿ ರೂ. ನೆರವು ನೀಡಲು ಸಾಧ್ಯವಾಗಿದೆ. 27 ಅಶಕ್ತ ಕಲಾವಿದರಿಗೆ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ. ಹಿರಿಯ ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್. ಸಾಮಗರು ಮಲ್ಪೆ ಬಳಿ ಸುಮಾರು ಅರ್ಧ ಎಕರೆ ಜಾಗ ದಾನ ನೀಡಿದ್ದು, ಇಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದಾನಿಗಳಾದ ಆರ್.ಎಸ್.ಶಾರದಾ ಪ್ರಸಾದ್- ನಳಿನಿ ಪ್ರಸಾದ್ ನೆರವಿನಿಂದ 20 ಮನೆಗಳನ್ನು ನಿರ್ಮಿಸಿ ‘ಪಟ್ಲ ಯಕ್ಷಾಶ್ರ ಯ’ಯೋಜನೆಯಡಿ ಕಲಾವಿದರಿಗೆ ವಿತರಿಸುವ ಮಹತ್ವದ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಅವರು ತಿಳಿಸಿದರು.
ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಪ್ರೆಸ್‌ಕ್ಲಬ್ ನ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಅಧ್ಯಕ್ಷ ಅಧ್ಯಕ್ಷ ತೆ ವಹಿಸಿದ್ದರು. ಸಮಾರಂಭದಲ್ಲಿದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಆರ್ ಕಾರ್ಯ ಕ್ರಮ ಸಂಯೋಜಕ ದಯಾ ಕುಕ್ಕಾಜೆ , ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಡಸ್ಥಳ ವಂದಿಸಿದರು. ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles