ಮ೦ಗಳೂರು: 8 ಗಂಟೆಗಳ ದುಡಿಮೆಗಾಗಿ 139 ವರ್ಷಗಳ ಹಿಂದೆ ಅಮೇರಿಕಾದ ಚಿಕಾಗೋ ನಗರದ ಕಾರ್ಮಿಕರು ನಡೆಸಿದ ಐತಿಹಾಸಿಕ ಹೋರಾಟ ಆಕಸ್ಮಿಕವೇನಲ್ಲ.ಅಂದಿನ ಬಂಡವಾಳಶಾಹಿಗಳ ಲಾಭಕೋರತನದಿಂದ ಆಕ್ರೋಶಿತಗೊಂಡ ಕಾರ್ಮಿಕರು 16 ಗಂಟೆಗಳ ದುಡಿಮೆಯ ವಿರುದ್ದ ದಶಕಗಳ ಕಾಲ ಪ್ರಬಲ ಹೋರಾಟ ನಡೆಸಿದ್ದರ ಪರಿಣಾಮವಾಗಿ ಕೊನೆಗೆ 8 ಗಂಟೆಗಳ ದುಡಿಮೆಯ ಕೂಗು ಜಗತ್ತಿನಾದ್ಯಂತ ಮಾರ್ದನಿಸಿ ಮೇ ದಿನಾಚರಣೆಯುಂಟಾಯಿತು. ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ ಎಂಬ ಕರೆ ನೀಡುವ ಕಾರ್ಮಿಕ ವರ್ಗ ಸಮಸ್ತ ಮಾನವಕುಲದ ಏಳಿಗೆಗಾಗಿ ಶ್ರಮಿಸುತ್ತಿದ್ದು ವಿಶ್ವ ಮಾನವ ಸಂದೇಶದ ಜೊತೆಗೆ ನಿಜವಾದ ದೇಶಪ್ರೇಮವನ್ನು ಜನತೆಗೆ ಭೋದಿಸುತ್ತದೆಯೇ ಹೊರತು ಬಂಡವಾಳಶಾಹಿಗಳ ಲಾಭನಷ್ಟ ಲೆಕ್ಜಾಚಾರದ ಕಪಟ ದೇಶಪ್ರೇಮವನ್ನಲ್ಲ ಎಂದು ಜಿಲ್ಲೆಯ ಪ್ರಗತಿಪರ ಚಿಂತಕರೂ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಡಾ.ಕೃಷ್ಣಪ್ಪ ಕೊಂಚಾಡಿಯವರು ಅಭಿಪ್ರಾಯಪಟ್ಟರು.
ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಮಂಗಳೂರಿನಲ್ಲಿ ಜರುಗಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
CITU ಜಿಲ್ಲಾಧ್ಯಕ್ಷ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡಿ, ಇಂದಿನ ಬಂಡವಾಳಶಾಹಿ ವ್ಯವಸ್ಥೆ ರೈತ ಕಾರ್ಮಿಕರ ಹಾಗೂ ಜನಸಾಮಾನ್ಯರ ಪ್ರಶ್ನೆಗಳನ್ನು ಇತ್ಯರ್ಥ ಪಡಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎ೦ದರು.
CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಚುನಾವಣಾ ಬಾಂಡ್ ಹಗರಣ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿದ್ದು,ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೋದಿ ಸರ್ಕಾರದ ಇನ್ನೊಂದು ಮುಖವನ್ನು ಜಗಜ್ಜಾಹೀರುಗೊಳಿಸಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮೇ ದಿನ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಿ.ಎನ್ ದೇವಾಡಿಗರವರು ಮಾತನಾಡಿ ದೇಶದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವಿದ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಜಾತ್ಯಾತೀತ ಪರಂಪರೆಗಳು ಗಂಭೀರ ಸ್ವರೂಪವನ್ನು ತಾಳಲಿದ್ದು ದೇಶದ ಸಂವಿಧಾನವನ್ನೇ ಬದಲಾಯಿಸಿ ಅರಾಜಕತೆಯನ್ನು ಸ್ರಷ್ಠಿಸಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು
ವೇದಿಕೆಯಲ್ಲಿ ಮೇ ದಿನ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ ಇಮ್ತಿಯಾಜ್,ಅಧ್ಯಕ್ಷ ಮಹಮ್ಮದ್ ಮುಸ್ತಾಫ,ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಂಚಾಡಿ,ಹಿರಿಯ ಕಾರ್ಮಿಕ ಮುಖಂಡರಾದ ಯು ಬಿ ಲೋಕಯ್ಯ,ಜಯಂತಿ ಶೆಟ್ಟಿ, ಭಾರತಿ ಬೋಳಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಚಿಂತಕರಾದ ವಾಸುದೇವ ಉಚ್ಚಿಲ್,ಎರಿಕ್ ಲೋಬೋ,ಲಕ್ಷ್ಮಣ್ ವಾಮಂಜೂರು,ಕರಿಯ ಕೆ, ವಸಂತ ಕುಮಾರ್,ಯುವ ನಾಯಕರಾದ ನವೀನ್ ಕೊಂಚಾಡಿ,ಜಗದೀಶ್ ಬಜಾಲ್, ದೀಪಕ್ ಬಜಾಲ್,ಪ್ರದೀಪ್, ಕಾರ್ಮಿಕ ನಾಯಕರಾದ ಜಯಲಕ್ಷ್ಮಿ, ರಫೀಕ್ ಹರೇಕಳ,ಶಶಿಧರ್ ಶಕ್ತಿನಗರ, ಉಮೇಶ್, ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ,ಪ್ರಮೀಳಾ ದೇವಾಡಿಗ, ಅಸುಂತ ಡಿಸೋಜ, ಯೋಗಿತಾ ಮುಂತಾದವರು ಹಾಜರಿದ್ದರು.
ಸಭೆಯ ಪ್ರಾರಂಭದಲ್ಲಿ ನೂರಾರು ಸಂಖ್ಯೆಯ ಕಾರ್ಮಿಕರು ಮಂಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಆಕರ್ಷಕ ಮೆರವಣಿಗೆಯನ್ನು ನಡೆಸುವ ಮೂಲಕ ಕಾರ್ಮಿಕ ವರ್ಗದ ಐಕ್ಯತೆಯನ್ನು ಪ್ರದರ್ಶಿಸಿದರು.