ಮಂಗಳೂರು : ಶಿಕ್ಷಣವು ಯಾವತ್ತಿಗೂ ಮೌಲ್ಯಾಧಾರಿತ ಶಿಕ್ಷಣ ಆಗಿರಬೇಕು .ಮಾನವೀಯ ಗುಣಗಳನ್ನು ಮರು ನೆನಪಿಸುವುದು ಈಗಿನ ಶಿಕ್ಷಣದ ಪ್ರಮುಖ ಕೆಲಸವಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ ಎಂದು ಹಿರಿಯ ಜನಪದ ವಿದ್ವಾಂಸರೂ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಕೆ ಪೇಜಾವರರವರು ಹೇಳಿದರು.
ಅವರು ಚಿಣ್ಣರ ಚಾವಡಿ ಮಂಗಳೂರು ಮತ್ತು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ 5 ದಿನಗಳ ಕಾಲ ನಡೆಯಲಿರುವ ಚಿಣ್ಣರ ಕಲರವ-2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಸೈಂಟ್ ಜೆರೋಸಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅರ್ಪಿತಾರವರು ಮಾತನಾಡಿ ಮಕ್ಕಳು ಸಾಧನೆಯ ಗುರಿಯನ್ನು ಇಟ್ಟುಕೊಂಡಿರಬೇಕು. ಆಸಕ್ತಿ ಇರುವ ವಲಯಗಳ ಕುರಿತು ಗಮನ ಹರಿಸಿ ನಿರಂತರ ಬೆನ್ನು ಬಿದ್ದು ಅಭ್ಯಾಸಿಸಿ ಆ ಗುರಿಯತ್ತ ಮುನ್ನಡೆಯಬೇಕು ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು ಎಂದು ಹೇಳಿದರು.
ಪ್ರಗತಿಪರ ಚಿಂತಕರಾದ ಮಾಕ್ಸಿಂ ಡಿ’ಸೋಜ ಬೋಂದೆಲ್ ಮಾತನಾಡುತ್ತಾ ವಿಜ್ಞಾನವು ಮಕ್ಕಳ ನಿತ್ಯದ ಪಾಠವಾಗಬೇಕು. ಸಂವಿಧಾನದ ಅರಿವು ಮಕ್ಕಳಿಗಿರಬೇಕು. ಭಾರತದ ಸಂವಿಧಾನದ ಘನತೆಯು ಮಕ್ಕಳಿಗೆ ತಿಳಿದಿರಬೇಕು ಎಂದರು.
ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಮನೋಜ್ ವಾಮಂಜೂರು ಮಾತನಾಡುತ್ತಾ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಮಕ್ಕಳಿಗೆ ಪುಸ್ತಕದ ಪ್ರೀತಿಯನ್ನು ಹೆಚ್ಚಿಸಿ,ಓದುವ ಹವ್ಯಾಸ ಮಕ್ಕಳಿಗೆ ಹೊಸ ಜಗತ್ತನ್ನು ನೀಡಬಲ್ಲದು ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕೋಶಾಧಿಕಾರಿಯಾದ ಡೊಲ್ಫಿ ಡಿ’ಸೋಜ ವಹಿಸಿದ್ದರು. ವೇದಿಕೆಯಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ, ಮಾಜಿ ಜಿಲ್ಲಾ ವಿಧ್ಯಾರ್ಥಿ ನಾಯಕ ಮೆಲ್ವಿನ್ ಪಾಯಸ್ ,ಪ್ರಗತಿಪರ ಚಿಂತಕ ಬಿ.ಎನ್ ದೇವಾಡಿಗ,ವಸಂತ ಕುಮಾರ್, ಜಿಲ್ಲಾ ಯುವ ನಾಯಕ ಸ್ಟ್ಯಾನಿ ಲೋಬೋ,ಸಾಮಾಜಿಕ ಚಿಂತಕ ಮರ್ಲಿನ್ ರೇಗೋ ಮೊದಲಾದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಭಾಗಿಗಳಾಗಿ ಮುಂದಿನ ಐದು ದಿನಗಳ ಕಾಲ ವಿವಿಧ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಶಿಬಿರದ ನಿರ್ದೇಶಕ ಪ್ರವೀಣ್ ವಿಸ್ಮಯ ಬಜಾಲ್ ರವರು ತಿಳಿಸಿದರು.
ಚಿಣ್ಣರ ಚಾವಡಿ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚಿಣ್ಣರ ಚಾವಡಿಯ ಯೋಗಿತಾ ಉಳ್ಳಾಲ ವಂದಿಸಿದರು.