ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ) ಮಂಗಳೂರು ಇದರ ಆಶ್ರಯದಲ್ಲಿ ಮೇ 26 ರಂದು ಭಾನುವಾರ ಅಡ್ಯಾರ್ ನಲ್ಲಿರುವ ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಮಾರಂಭ 2024” ಜರಗಲಿದೆ.
ಸಮಾರಂಭದಲ್ಲಿ ಬೆಳಿಗ್ಗೆ 7.45 ಕ್ಕೆ ಚೌಕಿಪೂಜೆ, ಅಬ್ಬರ ತಾಳ, ಬಳಿಕ ಮಹಿಳಾ ಯಕ್ಷಗಾನ ನಡೆಯಲಿದೆ. ಬಳಿಕ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ ಆರ್ಶೀರ್ವಚನ ನೀಡಲಿದ್ದಾರೆ ಎ೦ದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮ೦ಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಮುಂಬೈ ಹೇರಂಭ ಕೆಮಿಕಲ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಂಡಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಶುಭಶಂಸನೆಗೈಯಲಿದ್ದಾರೆ.
ಆರೋಗ್ಯ ಶಿಬಿರದ ಉದ್ಘಾಟನೆಯನ್ನು ಡಾ ರವೀಶ್ ತುಂಗಾ ನೆರವೇರಿಸಲಿದ್ದಾರೆ. ರಕ್ತದಾನ ಶಿಬಿರವನ್ನು ಡಾ ಶ್ರೀಧರ್ ಉದ್ಘಾಟಿಸಲಿದ್ದಾರೆ. ಉಚಿತ ಕಣ್ಣು ಪರೀಕ್ಷೆ, ಕನ್ನಡ ವಿತರಣೆಯೂ ಇದೆ.
ಬೆಳಿಗ್ಗೆ 11 ಗಂಟೆಗೆ ಯುವ ಭಾಗವತರಿಂದ “ಗಾನ ವೈಭವ” ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಶಶಿ ಕ್ಯಾಟರರ್ಸ್ ಸಂಸ್ಥೆ, ಉಜಿರೆ ಕಾಶಿ ಪ್ಯಾಲೇಸ್ ಸಂಸ್ಥೆಯ ಮಾಲಕ ಶಶಿಧರ್ ಬಿ ಶೆಟ್ಟಿ ಬರೋಡಾ ವಹಿಸಲಿದ್ದಾರೆ. ಅತಿಥಿಗಳಾಗಿ ಜಮ್ಮು ಕಾಶ್ಮೀರ ಸರಕಾರದ ಪ್ರಿನ್ರಿಪಾಲ್ ಸೆಕ್ರೆಟರಿ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್, ಮುಂಬಯಿ ಭವಾನಿ ಶಿಪ್ಪಿಂಗ್ ಮಾಲಕ ಕೆ.ಡಿ ಶೆಟ್ಟಿ, ಮುಂಬಯಿ ಮೆಕಯ್ ಸಂಸ್ಥೆಯ ಅಧ್ಯಕ್ಷ ಕೆ ಎಂ ಶೆಟ್ಟಿ ಮಧ್ಯಗುತ್ತು ಮೊದಲಾದವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 3.30 ಕ್ಕೆ ಪಾರಂಪರಿಕ ಯಕ್ಷಗಾನ “ಕಿರಾತಾರ್ಜುನ” ಪ್ರದರ್ಶನಗೊಳ್ಳಲಿದೆ.
ಸಂಜೆ 5.15 ಕ್ಕೆ ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿಯವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪಟ್ಲ ಫೌಂಡೇಶನ್ ನ ಟ್ರಸ್ಟಿ, ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಚಲನ ಚಿತ್ರ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್ ಕೆ ಪ್ರಕಾಶ್ ಶೆಟ್ಟಿ, ಉದ್ಯಮಿ ತೋನ್ಸೆ ಆನಂದ ಶೆಟ್ಟಿ, ಡಾ ಎಚ್ ಎಸ್ ಬಲ್ಲಾಳ್, ಕೆ ಕೆ ಶೆಟ್ಟಿ, ವಕ್ವಾಡಿ ಪ್ರವೀಣ್ ಶೆಟ್ಟಿ, ಕನ್ಯಾನ ರಘುರಾಮ ಶೆಟ್ಟಿ, ಡಾ ಎಂ ಮೋಹನ್ ಆಳ್ವ ಮೊದಲಾದವರು ಭಾಗವಹಿದಲಿದ್ದಾರೆ.
ಯಕ್ಷಧ್ರುವ ಪಟ್ಲ ಪ್ರಶಸ್ತಿ
ಸಮಾರಂಭದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರನ್ನು 2024 ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2024 ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು CA ದಿವಾಕರ್ ರಾವ್ ಮತ್ತು ಶೈಲಾ ದಿವಾಕರ್ ಪಡೆಯಲಿದ್ದಾರೆ. ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ 18 ಮಂದಿ ಕಲಾ ಗೌರವವನ್ನು ಸ್ವೀಕರಿಸಲಿದ್ದಾರೆ.
2024 ರ ಸೇವಾ ಯೋಜನೆ
ಪಟ್ಲ ಪ್ರಶಸ್ತಿ ರೂ 1 ಲಕ್ಷ ಗೌರವ ಧನ.
3,500 ಕಲಾವಿದರಿಗೆ (ಯಕ್ಷಗಾನ, ನಾಟಕ -ರಂಗಭೂಮಿ, ದೈವಾರಾಧನೆ) ಅಪಘಾತ ವಿಮಾ ಯೋಜನೆ, 20 ಸಾವಿರ ನಗದಿನೊಂದಿಗೆ ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರಿಗೆ ಯಕ್ಷಧ್ರುವ ಕಲಾ ಗೌರವ. ವೈದ್ಯಕೀಯ, ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ, ಆಶಕ್ತರಿಗೆ ಧನಸಹಾಯ, ಗೃಹ ನಿರ್ಮಾಣಕ್ಕೆ ಸಹಾಯ ಧನ, ಸರಕಾರಿ ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಯೋಜನೆ.
11.5 ಕೋಟಿ ಮೊತ್ತದ ಸೇವಾ ಯೋಜನೆ ಅನುಷ್ಠಾನ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಂಟು ವರ್ಷಗಳಲ್ಲಿ ಸುಮಾರು 11.5 ಕೋಟಿ ರೂಪಾಯಿ ಮೊತ್ತದ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಪಟ್ಲ ಯಕ್ಷಾಶ್ರಯದ ಮೂಲಕ 26 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದೆ. 12 ಮನೆಗಳು ನಿರ್ಮಾಣ ಹಂತದ ಕೊನೆಯ ಹಂತದಲ್ಲಿದೆ. ಗೃಹ ನಿರ್ಮಾಣ ಯೋಜನೆಯಲ್ಲಿ 162 ಕಲಾವಿದರಿಗೆ ತಲಾ 25 ಸಾವಿರ ಮನೆ ರಿಪೇರಿಗೆ ಸಹಾಯ ಧನ ವಿತರಿಸಲಾಗಿದೆ. 160 ಮಂದಿ ತೀರಾ ಅಶಕ್ತ ಕಲಾವಿದರಿಗೆ 50 ಸಾವಿರ ವಿತರಿಸಲಾಗಿದೆ. ಪ್ರಖ್ಯಾತ ಆರು ಮಂದಿ ಕಲಾವಿದರಿಗೆ ತಲಾ ಒಂದು ಲಕ್ಷ ರೂಪಾಯಿಯೊಂದಿಗೆ ಪಟ್ಲ ಪ್ರಶಸ್ತಿ ನೀಡಲಾಗಿದೆ. ಪ್ರಾದೇಶಿಕ ಘಟಕಗಳ ವ್ಯಾಪ್ತಿಯಲ್ಲಿ ಸುಮಾರು 410 ಮಂದಿ ಕಲಾವಿದರು ಸಂಮಾನ ಮತ್ತು ಗೌರವ ಧನ ಪಡೆದಿರುತ್ತಾರೆ.
ಯಕ್ಷಗಾನದಲ್ಲಿ ದಾಖಲೆ ಬರೆದ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ
ಯಕ್ಷಧ್ರುವ ಯಕ್ಷ ಶಿಕ್ಣಣ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 3,500 ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಬೇರೆ ಬೇರೆ ಆಯಾಮಗಳ ಸ್ಪರ್ಧೆ, ಇದರಲ್ಲಿ 1,700 ವಿದ್ಯಾರ್ಥಿಗಳು ವೇಷಭೂಷಣಗಳೊಂದಿಗೆ ಒಂದೇ ದಿನ ರಂಗ ಪ್ರವೇಶ ಮಾಡಿರುವುದು ಯಕ್ಷಗಾನದಲ್ಲಿ ದಾಖಲೆಯಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸಂಸ್ಥೆಯೊಂದಿಗೆ ಮಹಿಳಾ ಘಟಕ ಮತ್ತು ವಿದೇಶದಲ್ಲಿರುವ ಘಟಕಗಳು ಸೇರಿದಂತೆ ಒಟ್ಟು 40 ಪ್ರಾದೇಶಿಕ ಘಟಕಗಳು ಕೆಲಸ ಮಾಡುತ್ತಿದೆ.
*2024 ನೇ ಸಾಲಿನ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ *
ಈ ಬಾರಿ ವೃತ್ತಿಪರ ಕಲಾವಿದರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ (ಕಲಾ, ವಾಣಿಜ್ಯ ಹಾಗು ವಿಜ್ಞಾನ ಹೀಗೆ ಒಟ್ಟು 4 ವಿಭಾಗಗಳಲ್ಲಿ) ಯಲ್ಲಿ 90% ಕ್ಕಿಂತ ಮೇಲ್ಪಟ್ಟು ಗರಿಷ್ಟ ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರವನ್ನು 2024ರ ಪಟ್ಲ ಸಂಭ್ರಮದಂದು ನೀಡಲಾಗುವುದು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ , ಪ್ರದೀಪ್ ಆಳ್ವ ಕದ್ರಿ, ಉಪಾಧ್ಯಕ್ಷ ಡಾ ಮನು ರಾವ್, ಜೊತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿ ಶೆಟ್ಟಿ ಅಶೋಕನಗರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.