19.9 C
Karnataka
Saturday, November 16, 2024

ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಭತ್ತದ ಬಿತ್ತನೆ ಬೀಜಗಳ ಲಭ್ಯತೆ

ಮಂಗಳೂರು: 2024ರ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರ್ವ ಸಿದ್ಧತೆಗಳು ಪ್ರಾರಂಭಗೊಂಡಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಗೆ ಕೃಷಿ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ.

 ಮುಂಗಾರು ಹಂಗಾಮಿನ ಬಿತ್ತನೆ ಜೂನ್ ಮೊದಲ ವಾರದಿಂದ ಪ್ರಾರಂಭವಾಗುವ ನೀರೀಕ್ಷೆ ಇದ್ದು, ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ಬಿತ್ತನೆ ಬೀಜ ಒದಗಿಸಲಾಗುತ್ತಿದೆ. ಕೃಷಿ ಇಲಾಖೆಯಿಂದ ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಪ್ರಮಾಣೀಕೃತ ಹಾಗೂ ನಿಜಚೀಟಿ ಬಿತ್ತನೆ ಬೀಜಗಳನ್ನು ದಾಸ್ತಾನು ಪಡೆದು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. 

 ಜಿಲ್ಲೆಯಲ್ಲಿ ಕೆಂಪಕ್ಕಿ ತಳಿಯ ಭತ್ತದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಲಭ್ಯವಿರುವ ಕೆಂಪಕ್ಕಿ ತಳಿಗಳಾದ ಜಯ (140-150 ದಿನಗಳು) 60.5 ಕ್ವಿಂಟಾಲ್, ಜ್ಯೋತಿ (115-120ದಿನಗಳು) 65.5 ಕ್ವಿಂಟಾಲ್, ಎಮ್‍ಓ-4 (130-135ದಿನಗಳು) 198 ಕ್ವಿಂಟಾಲ್ ಮತ್ತು ಸಹ್ಯಾದ್ರಿ ಕೆಂಪುಮುಕ್ತಿ (120-125 ದಿನಗಳು) 180 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಿ ಹಂತಹಂತವಾಗಿ ದಾಸ್ತಾನಿಕರಿಸಲು ಕ್ರಮವಹಿಸಲಾಗಿದೆ. 
  ಪ್ರಸಕ್ತ ಸಾಲಿನಲ್ಲಿ ಎಮ್‍ಓ-4 ತಳಿಯೊಂದಿಗೆ ಇತರೆ ಪರ್ಯಾಯ ಕೆಂಪಕ್ಕಿ ತಳಿಗಳಾದ ಜಯ, ಜ್ಯೋತಿ, ಸಹ್ಯಾದ್ರಿ ಕೆಂಪುಮುಕ್ತಿ ತಳಿಗಳ ಬಿತ್ತನೆ ಬೀಜಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. 

ಪ್ರಸ್ತುತ ರೈತ ಸಂಪರ್ಕ ಕೇಂದ್ರದಲ್ಲಿ ಎಮ್‍ಓ-4. 112 ಕ್ವಿಂಟಾಲ್, ಸಹ್ಯಾದ್ರಿ ಕೆಂಪುಮುಕ್ತಿ – 80 ಕ್ವಿಂಟಾಲ್, ಜಯ – 28.25 ಕ್ವಿಂಟಾಲ್, ಜ್ಯೋತಿ – 26 ಕ್ವಿಂಟಾಲ್ ದಾಸ್ತಾನಿದ್ದು, ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆಯುವಾಗ ವಿವಿಧ ತಳಿಯ ಭತ್ತದ ಅವಧಿ, ಬೇಸಾಯ ಕ್ರಮಗಳು ಹಾಗೂ ಸಸ್ಯ ಸಂರಕ್ಷಣಾ ವಿಧಾನಗಳ ಮಾಹಿತಿ ಪಡೆದು ಆಯಾ ಕಾಲಕ್ಕನುಗುಣವಾಗಿ ಬಿತ್ತನೆಗೆ ಉಪಯೋಗಿಸಬೇಕು.

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ್ಯಾದ್ರಿ ಕೆಂಪುಮುಕ್ತಿ ತಳಿಯನ್ನು ಹೊಸದಾಗಿ ಬಿತ್ತನೆಗೆ ಪರಿಚಯಿಸಲಾಗುತ್ತಿದ್ದು, ಇದು ಜ್ಯೋತಿ ತಳಿಗೆ ಪರ್ಯಾಯವಾದ ಕೆಂಪಕ್ಕಿ ತಳಿಯಾಗಿದೆ. ಸಹ್ಯಾದ್ರಿ ಕೆಂಪುಮುಕ್ತಿಯು ಅಧಿಕ ಇಳುವರಿ, ಬೆಂಕಿ ಮತ್ತು ಊದುಬತ್ತ ರೋಗ ನಿರೋಧಕ ಮುಂತಾದ ಗುಣಲಕ್ಷಣಗಳನ್ನು ಹೊಂದಿದೆ. ಎಕರೆಗೆ 20-25 ಕ್ವಿಂಟಾಲ್ ಅಂದಾಜು ಇಳುವರಿಯನ್ನು ನೀಡುತ್ತದೆ. ಎಮ್‍ಓ-4 ತಳಿಗೆ ಹೋಲಿಸಿದರೆ ಸಹ್ಯಾದ್ರಿ ಕೆಂಪುಮುಕ್ತಿಯು 8 ರಿಂದ 10 ದಿನಗಳು ಮುಂಚಿತವಾಗಿ ಕಟಾವಿಗೆ ಬರುತ್ತದೆ.

  ಮುಂಗಾರು ಹಂಗಾಮಿನ ಮೇ. ಅಂತ್ಯದವರೆಗಿನ ರಸಗೊಬ್ಬರದ ಬೇಡಿಕೆ 6772 ಟನ್ ಗಳಷ್ಟಿದ್ದು ಕಾಪು ದಾಸ್ತಾನಿನ ಸೇರಿದಂತೆ ಜಿಲ್ಲೆಯ ವಿವಿಧ ಸಹಕಾರಿ ಹಾಗೂ ಖಾಸಗಿ ಮಾರಾಟ ಮಳಿಗೆಗಳಲ್ಲಿ 14608 ಟನ್ ಗಳಷ್ಟು ರಸಗೊಬ್ಬರ ಲಭ್ಯವಿರುತ್ತದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳಿಗೆ ಪೂರೈಕೆ ಸಮರ್ಪಕವಾಗಿದ್ದು, ರೈತರು ರೈತ ಸಂಪರ್ಕ ಕೇಂದ್ರಗಳಿಂದ ತಾವು ಖರೀದಿಸುವ ಬಿತ್ತನೆ ಬೀಜಗಳ ಕುರಿತು ಹೆಚ್ಚಿನ ಮಾಹಿತಿ ಪಡೆದು ಬಿತ್ತನೆಗೆ ಉಪಯೊಗಿಸುವಂತೆ  ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles