ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಇದರ ವತಿಯಿಂದ ಜರುಗಿದ ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪ ಸಮಾರಂಭ ಆದಿತ್ಯವಾರ ಸಂಜೆ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು.
ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಅವರು, “ಕಲಾವಿದನಾದವ ಪ್ರಶಸ್ತಿಗಾಗಿ ಫೈಲ್ ಹಿಡಿದುಕೊಂಡು ರಾಜಕಾರಣಿಗಳ ಹತ್ರ ಹೋಗುವುದು, ಇನ್ ಫ್ಲುಯೆನ್ಸ್ ಮಾಡುವುದು ಮಾಡಬಾರದು. ಪ್ರಶಸ್ತಿಗೆ ನಾವು ಯೋಗ್ಯರಾಗಿದ್ದರೆ ಅದು ಹುಡುಕಿಕೊಂಡು ಬರುತ್ತದೆ. ಆಗಮಾತ್ರ ಆ ಪ್ರಶಸ್ತಿಗೆ ಮರ್ಯಾದೆ ಜಾಸ್ತಿ. ಯಕ್ಷಗಾನ ಕಲೆಗೆ ನೀರು, ಗೊಬ್ಬರ ಹಾಕಿ ಬೆಳೆಸಿದವರು ಹಳೆಯ ತಲೆಮಾರಿನವರು. ಈಗ ಆ ಕೆಲಸವನ್ನು ಪಟ್ಲ ಫೌಂಡೇಶನ್ ಮಾಡುತ್ತಾ ಬಂದಿದೆ. ಇಂತಹ ಸಂಘಟನೆ ನೂರುಕಾಲ ಬಾಳಲಿ” ಎಂದರು.
ಆಶೀರ್ವಚನದ ನುಡಿಗಳನ್ನಾಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, “ಪಟ್ಲ ಸತೀಶ್ ಶೆಟ್ಟಿ ಅವರು ನಿಜವಾದ ಬಿಗ್ ಬಾಸ್. ಒಂದು ಉತ್ತಮ ಕಾರ್ಯಕ್ಕಾಗಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ದಾನಿಗಳನ್ನು ನೋಡಬೇಕಾದರೆ ನಾವು ಪಟ್ಲ ಸಂಭ್ರಮಕ್ಕೆ ಬರಬೇಕು. ಎಲ್ಲಿ ಎಲ್ಲ ಬೇಧ ಭಾವ ಮರೆತು ಒಂದಾಗಿ ಸಮಾಜಮುಖಿ ಚಿಂತನೆಯ ಕಾರ್ಯದಲ್ಲಿ ಬೆರೆಯುವುದನ್ನು ನೋಡುವುದೇ ಚೆಂದ. ಅರ್ಥಪೂರ್ಣವಾದ ಕಾರ್ಯಕ್ರಮ ಮುಂದೆಯೂ ಇದೇ ರೀತಿ ಮುಂದುವರಿಯಲಿ” ಎಂದು ಶುಭ ಹಾರೈಸಿದರು.
“ಪಟ್ಲ ಫೌಂಡೇಶನ್ ಆಲದ ಮರ ಇದ್ದಂತೆ” -ಕಿಚ್ಚ ಸುದೀಪ
“ಪಟ್ಲ ಫೌಂಡೇಶನ್ ಆಲದ ಮರ ಇದ್ದಂತೆ, ಕಲಾವಿದರ ಕಷ್ಟವನ್ನು ಅರಿತು ಸಂಘಟನೆ ಅವರನ್ನು ಸಲಹುತ್ತಿದೆ. ಪಟ್ಲ ಸತೀಶ್ ಶೆಟ್ಟಿಯವರ ಸಾಮಾಜಿಕ ಕಾರ್ಯ ಅದ್ಭುತವಾದದ್ದು. ಅವರ ಬಗ್ಗೆ ತಿಳಿಯುತ್ತಾ ಹೋದಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ದಾನಿಗಳ ಜೊತೆಗೆ ವೇದಿಕೆ ಹಂಚಿಕೊಳ್ಳಲು ಖುಷಿಯಾಗುತ್ತದೆ. ನನ್ನ ಅಮ್ಮ ಇಲ್ಲಿಯವರೇ ಆಗಿರುವ ಕಾರಣ ನಾನು ಕೂಡಾ ತುಳುವನೇ ಆದರೆ ನನಗೆ ತುಳು ಮಾತಾಡಲು ಕಲಿಸಿಲ್ಲ. ನನಗೆ ತಿಳಿದಂತೆ ಮಂಗಳೂರಿನ ಜನರು ಸ್ವಾಭಿಮಾನಿಗಳು. ಇಲ್ಲಿನ ಜನರ ಮನಸ್ಸಲ್ಲಿ ಇಷ್ಟು ಪ್ರೀತಿ ಸಿಕ್ಕಿರುವುದೇ ನನ್ನ ಭಾಗ್ಯ” ಎಂದು ಕನ್ನಡ ಚಿತ್ರರಂಗದ ಖ್ಯಾತನಟ ಕಿಚ್ಚ ಸುದೀಪ್ ಹೇಳಿದರು.
ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಹೇರಂಭ ಕೆಮಿಕಲ್ ಇಂಡಸ್ಟ್ರಿಸ್ ಮುಂಬೈ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕೆ.ಕೆ. ಶೆಟ್ಟಿ, ಫಾರ್ಚುನ್ ಗ್ರೂಫ್ ಮಾಲಕ ವಕ್ವಾಡಿ ಪ್ರವೀಣ್ ಶೆಟ್ಟಿ, ಗೋಪಾಲ ಶೆಟ್ಟಿ, ರಘು ಎಲ್. ಶೆಟ್ಟಿ, ತಲ್ಲೂರು ಶಿವರಾಮ್ ಶೆಟ್ಟಿ, ಸಂತೋಷ್ ಕುಮಾರ್ ರೈ, ಕನ್ಯಾನ ರಘುರಾಮ ಶೆಟ್ಟಿ, ಶಶಿಧರ ಶೆಟ್ಟಿ ಇನ್ನಂಜೆ, ಹರೀಶ್ ಶೇರಿಗಾರ್, ಆನಂದ್ ಸಿ. ಕುಂದರ್, ಕೃಷ್ಣಮೂರ್ತಿ ಮಂಜ, ಎನ್.ಟಿ. ಪೂಜಾರಿ, ಅಮರಾನಾಥ ಎಸ್.ಎಸ್. ಭಂಡಾರಿ, ಸುಧಾಕರ್ ಶೆಟ್ಟಿ ಸುಗ್ಗಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಉಳಿ ಯೋಗೀಂದ್ರ ಭಟ್ ಯುಎಸ್ಎ, ಆಶಾ ಆನಂದ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ ಉಳ್ತೂರು, ಅಜಿತ್ ಶೆಟ್ಟಿ ಅಂಕಲೇಶ್ವರ, ಗಿರೀಶ್ ಶೆಟ್ಟಿ ಕಟೀಲು, ಪಟ್ಲ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಸಿಎ ಸುದೇಶ್ ಕುಮಾರ್ ರೈ, ಅಶೋಕ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ರವಿಚಂದ್ರ ಶೆಟ್ಟಿ, ಡಾ. ಮನು ರಾವ್, ದುರ್ಗಾ ಪ್ರಕಾಶ್ ಪಡುಬಿದ್ರೆ, ಜಗನ್ನಾಥ ಶೆಟ್ಟಿ ಬಾಳ, ರಾಜೀವ ಪೂಜಾರಿ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
2024ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ಪುರಸ್ಕೃತ ಸಿಎ ದಿವಾಕರ್ ರಾವ್ ಹಾಗೂ ಶೈಲಾ ದಿವಾಕರ್ ದಂಪತಿಯನ್ನು ಸನ್ಮಾನಿಸಲಾಯಿತು.ಪ್ರದೀಪ್ ಆಳ್ವ ಕದ್ರಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ, ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.