19.9 C
Karnataka
Monday, November 18, 2024

ಸಂಚಾರಿ ಉಲ್ಲಂಘನೆ ನ್ಯಾಯ ಸಂಹಿತೆಯಲ್ಲಿ ಬದಲಾವಣೆ, ಇನ್ಮುಂದೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ :ಡಿಸಿಪಿ ಬಿ.ಪಿ. ದಿನೇಶ್ ಕುಮಾರ್

ಮಂಗಳೂರು : ಬಸ್ಸೆಂದರೆ ವಾಹನಗಳಲ್ಲಿ ದೊಡ್ಡಣ್ಣ, ಹಾಗಾಗಿ ಸಣ್ಣ ವಾಹನಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿರಿ. ನ್ಯಾಯಸಂಹಿತೆಯಲ್ಲಿ ಮುಂದಿನ ತಿಂಗಳಿನಿಂದ ಬದಲಾವಣೆಗಳು ಆಗಲಿದೆ. ಸಂಚಾರ ನಿಯಮ ಉಲ್ಲಂಘನೆಗಳ ಶಿಕ್ಷೆಯ ಪ್ರಮಾಣ ಮತ್ತು ದಂಡದ ಪ್ರಮಾಣ ಹೆಚ್ಚಾಗಲಿದೆ ಎಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್
ಹೇಳಿದರು.

ದ.ಕ ಬಸ್ ಮಾಲಕರ ಸಂಘ, ಕೆನರಾ ಬಸ್ಸು ಮಾಲಕರ ಸಂಘ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜು(ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸಂಯುಕ್ತ ಆಶ್ರಯದಲ್ಲಿ ಬಸ್ಸು ಚಾಲಕರ – ನಿರ್ವಾಹಕರ ಮಾಹಿತಿ ಕಾರ್ಯಗಾರ 2024ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮಥಾಯಸ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಮಂಗಳೂರು ನಗರದ ರಸ್ತೆಯನ್ನು ಅಪಘಾತ ರಹಿತ ರಸ್ತೆ ಮಾಡಲು ಇಲಾಖೆ ಪಣ ತೊಟ್ಟಿದೆ. ಅದರ ಭಾಗವಾಗಿ ಕಾರ್ಯಗಾರ ನಡೆಸಲು ಸೂಚಿಸಲಾಗಿದೆ. 80 ವರ್ಷಗಳ ಇತಿಹಾಸದ ಖಾಸಗಿ ಬಸ್ಸಿನ ವ್ಯವಸ್ಥೆ ಮಂಗಳೂರಿನಲ್ಲಿದೆ. ರಸ್ತೆಗಳು ಹಾಗೇ ಇದ್ದರೂ ವಾಹನಗಳ ಸಂಖ್ಯೆ ದುಪ್ಪಟ್ಟಾಗಿವೆ. ಬಸ್ ಚಾಲಕರು ನಿಯಮಗಳ ಪಾಲನೆ ಮಾಡುವಲ್ಲಿ ಹಿಂದೇಟು ಹಾಕುವುದರಿಂದ ಕಾರ್ಯಗಾರಗಳು ಅನಿವಾರ್ಯ ವಾಗಿದೆ. ಪೊಲೀಸರು ದಂಡ ವಿಧಿಸಿದರೂ ನಿಯಮ ಉಲ್ಲಂಘನೆಗಳು ನಿಂತಿಲ್ಲ. ತಾಳ್ಮೆ ಅನ್ನುವುದು ಚಾಲಕರಲ್ಲಿ ಇಲ್ಲದಂತಾಗಿದೆ. ನಗರ ಸುರಕ್ಷಿತವಾಗಿದೆ ಅನ್ನುವ ಮನೋಭಾವ ಜನರಲ್ಲಿ ಮೂಡುವಂತಾಗಲು ಕಾರ್ಯಾಗಾರದಲ್ಲಿ ಸಿಗುವ ಮಾಹಿತಿಯನ್ನು ಕರ್ತವ್ಯದಲ್ಲಿ ಅಳವಡಿಸಿಕೊಳ್ಳಿರಿ. ನ್ಯಾಯ ಸಂಹಿತೆಯಲ್ಲಿ ಬದಲಾವಣೆಗಳಾಗಿದ್ದು, ಐಪಿಸಿ ಬದಲಾಗಿ ಬಿಎನ್ ಎಸ್ ನ್ಯಾಯಸಂಹಿತೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದ್ದು, ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ. ನಿರ್ಲಕ್ಷ್ಯತನದ ಚಾಲನೆ ಐಪಿಸಿ 279 ಬದಲಾಗಿ ಬಿಎನ್ ಎಸ್ ಕಾಯಿದೆಯಡಿ 281 , 6 ತಿಂಗಳ ಕಾರಾಗೃಹದಿಂದ 5,000 ದಂಡ , 3 ವರ್ಷ ಕಾರಾಗೃಹದಿಂದ 10,000 ದಂಡಕ್ಕೆ ಏರಿಕೆ, ಸಾಮಾನ್ಯ ಗಾಯ 337 ಐಪಿಸಿ ಬದಲಾಗಿ ಬಿಎನ್ ಎಸ್ 125 A, 125B, ಮರಣ ಸಂಭವಿಸಿದಾಗ 304 A ಬದಲು 106 BNS,ಎರಡು ವರ್ಷಗಳಿದ್ದ ಶಿಕ್ಷೆಯ ಪ್ರಮಾಣ 5 ವರ್ಷಕ್ಕೆ ಏರಿಕೆ, ಅಪಘಾತದ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸದೇ ಇದ್ದಲ್ಲಿ 134, 134A, 134B, ಅಪಘಾತದ ಮಾಹಿತಿ ಪೊಲೀಸ್ ಠಾಣೆಗೆ‌ ನೀಡದೇ ಇರುವುದು, ಹಿಟ್ ಆಂಡ್ ರನ್ ಪ್ರಕರಣಗಳಿಗೆ 106(2) ಬಿಎನ್ ಎಸ್ ಕಾಯಿದೆಗಳಡಿ ಪ್ರಕರಣಗಳು ದಾಖಲಾಗಲಿದೆ.
ರೇಸಿಂಗ್, ಮದ್ಯಸೇವಿಸಿ ಚಾಲನೆ, ಮೊಬೈಲ್ ಫೋನ್ ಬಳಕೆ, ಓವರ್ ಟೇಕ್, ರೆಡ್ ಲೈಟ್ ಉಲ್ಲಂಘನೆ, ಒನ್ ವೆ ಚಾಲನೆ, ರೇಸಿಂಗ್ ಪ್ರಕರಣಗಳಲ್ಲಿ ಚಾಲಕನ ಚಾಲನ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳಲಾಗುವುದು. ಮುಂದೆ ಎಲ್ಲಾ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಕೆ ಆಗುವುದರಿಂದ ಹೆಲ್ಮೆಟ್, ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಹಾಕದಿರುವುದನ್ನೂ ಪತ್ತೆಹಚ್ಚಲಾಗುವುದು. ಬಸ್ಸುಗಳ ನಿರ್ವಾಹಕರು ಟಿಕೇಟು ನೀಡದೆ ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳಬೇಡಿ. ಕರ್ಕಷ ಹಾನ್೯ಗಳ ಕುರಿತು ಜಾಗೃತಿ ವಹಿಸಿದ್ದರೂ, ಮುಂಬೈ, ಬೆಂಗಳೂರು ದೂರದೂರಿಗೆ ತೆರಳುವ ಬಸ್ಸುಗಳ ಹಾನ್೯ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಸ್ವಶಿಸ್ತು ಕಾಪಾಡುವ ಮೂಲಕ ಸಾರ್ವಜನಿಕರ ಜವಾಬ್ದಾರಿಯನ್ನು ನಿರ್ವಹಿಸಿ ಬಸ್ ನಿಲ್ದಾಣಕ್ಕೇ ಬಸ್ಸುಗಳ ಕೊಂಡೊಯ್ಯಿರಿ. ಮೀಸಲು ಸೀಟುಗಳಲ್ಲಿ ಅವರಿಗೇ ಅವಕಾಶ ಕಲ್ಪಿಸಿರಿ. ಸಂಘ ಹೊರಡಿಸಿರುವ ಭಿತ್ತಿಪತ್ರದಲ್ಲಿ ಅವಶ್ಯಕ ಮಾಹಿತಿಗಳಿದ್ದು, ಎಲ್ಲರೂ ಪಾಲಿಸಿರಿ. ಎಂದರು.

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಆಲ್ವಿನ್ ಡೇಸಾ . , ಸಹಾಯಕ ಪೊಲೀಸ್ ಆಯುಕ್ತ ನಜ್ಞಾ ಫಾರೂಕಿ , ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್ , ಉಪನ್ಯಾಸಕ, ರಾಷ್ಟ್ರಮಟ್ಟದ ತರಬೇತುದಾರ ರಾಜೇಂದ್ರ ಭಟ್ , ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಜೀವಂದರ್ ಅಧಿಕಾರಿ ಉಪಸ್ಥಿತರಿದ್ದರು.ಸಂಚಾರಿ ಠಾಣೆಯ ಠಾಣಾಧಿಕಾರಿಗಳಾದ ಆನಂದ್ , ಉರಗಪ್ಪ, ದೀಪಕ್, ಕೃಷ್ಣಾನಂದ ನಾಯಕ್ ಭಾಗವಹಿಸಿದ್ದರು.
ಅಧ್ಯಕ್ಷ ಅಝೀಝ್ ಪರ್ತಿಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರ ಪಿಲಾರ್ ವಂದಿಸಿದರು. ಆರ್ .ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles