ಮಂಗಳೂರು, ಮೇ ೨೯: ದೈಹಿಕ ಕ್ಷಮತೆ ಆಧುನಿಕ ಜೀವನ ಶೈಲಿಯಲ್ಲಿ ಅತ್ಯಂತ ಪ್ರಮುಖ ವಸ್ತುವಾಗಿದೆ. ಅದನ್ನು ಬೇರೆಲ್ಲೂ ಪಡೆಯಲು ಸಾಧ್ಯವಿಲ್ಲ. ಬದಲಾಗಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡು ನಿರಂತರತೆಗಾಗಿ ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಲಹೆ ನೀಡಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಕ್ರೀಡಾಕೂಟ ದಿನವನ್ನು ಉದ್ಘಾಟಿಸಿ ಮಾತನಾಡಿದರು. ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಕಾಲೇಜಿನಲ್ಲಿ ಲಭ್ಯವಿರುವ ಕ್ರೀಡಾ ಚಟುವಟಿಕೆಗಳಲ್ಲಿ ಹಾಗೂ ವಿವಿಧ ಅಂತರ ಕಾಲೇಜು ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸದೃಢವಾಗಿರಲು ದೈಹಿಕ ವ್ಯಾಯಾಮದ ಅಗತ್ಯವಿದೆ. ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ದೇಹದ ಸದೃಢತೆಯನ್ನು ಮೌಲ್ಯಮಾಪನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾಲೇಜಿನ ಶಿಸ್ತು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ಕ್ರೀಡಾಕೂಟದುದ್ದಕ್ಕೂ ಕ್ರೀಡಾ ಮನೋಭಾವವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿವಿಧ ಸ್ನಾತಕೋತ್ತರ ವಿಭಾಗಗಗಳ ಸಂಯೋಜಕರುಗಳಾದ ಪ್ರೊ. ಗಣಪತಿ ಗೌಡ, ಪ್ರೊ. ರಾಮಕೃಷ್ಣ, ಪ್ರೊ. ಅಬೋಬಕ್ಕರ್ ಸಿದ್ಧಿಕ್, ಪ್ರೊ. ಜಯವಂತ್ ನಾಯಕ್, ಡಾ. ಸಂಜಯ್ ಅಣ್ಣಾರಾವ್, ಡಾ. ನಾಗರತ್ನ ರಾವ್, ಪ್ರೊ. ಯತೀಶ್ ಕುಮಾರ್, ಡಾ, ಮೀನಾಕ್ಷಿ ಎಂ. ಎಂ., ಡಾ. ಸುಮಾ ಟಿ. ಆರ್. ಉಪಸ್ಥಿತರಿದ್ದರು.