23.8 C
Karnataka
Tuesday, November 19, 2024

ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿಗಳು ಸಕಾಲಕ್ಕೆ ದೊರಕಬೇಕು : ಜಿಲ್ಲಾಧಿಕಾರಿ ಸೂಚನೆ

ಮಂಗಳೂರು:ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿಗಳು ಸುಲಲಿತವಾಗಿ ಹಾಗೂ ಸಕಾಲಕ್ಕೆ ದೊರಕುವಂತೆ ಮಾಡಲು ಮತ್ತು ಔಷಧಿಗಳ ಸಮರ್ಪಕ ನಿರ್ವಹಣೆಗೆ ಹಾಗೂ ಬಳಕೆಗೆ ಸಂಬಂಧಿಸಿದಂತೆ ಮುಖ್ಯ ಉಗ್ರಾಣದಿಂದ ರೋಗಿಗಳಿಗೆ ತಲುಪಿಸುವವರೆಗೂ ವಿವಿಧ ಹಂತಗಳಲ್ಲಿ ಕ್ರಮಬದ್ಧವಾಗಿ ನಿರ್ವಹಿಸಲು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಕೆಎಂಸಿ ಆಸ್ಪತ್ರೆಯ ಕಡೆಯಿಂದ ಒಂದು ಪ್ರತ್ಯೇಕ ಔಷಧ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿಕೊಂಡು, ಅನುಷ್ಠಾನಗೊಳಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಅವರು ತಿಳಿಸಿದರು.

   ಅವರು ಸೋಮವಾರ ಜಿಲ್ಲಾ ವೆನ್‍ಲಾಕ್ ಹಾಗೂ ಲೇಡಿಘೋಷನ್ ಆಸ್ಪತ್ರೆಗಳಿಗೆ ಭೇಟಿ ನೀಡಿ ವೆನ್‍ಲಾಕ್‍ನಲ್ಲಿ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಿ ಮಾತನಾಡಿದರು. 
  ವೆನ್‍ಲಾಕ್ ಆಸ್ಪತ್ರೆಯ ಜೈಲು ವಾರ್ಡ್ ಭೇಡಿ ನೀಡಿದ ಜಿಲ್ಲಾಧಿಕಾರಿಗಳು, ಪಹರೆಯನ್ನು ಇನ್ನಷ್ಟು ಬಲಪಡಿಸಲು ತಿಳಿಸಿದರು. ರೋಗಿಗಳೊಂದಿಗೆ ಮಾತನಾಡಿ, ಅಹವಾಲು ಆಲಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ವೆನ್‍ಲಾಕ್ ಆಸ್ಪತ್ರೆಯ ವಿವಿಧ ಆಡಳಿತ ಕಡತಗಳನ್ನು ಪರಿಶೀಲಿಸಿ, ಔಷಧ ಖರೀದಿ ಸೇರಿದಂತೆ ವಿವಿಧ ಕಡತಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ನೀಡಿದರು.

    ವೆನ್‍ಲಾಕ್ ಜಿಲ್ಲಾಸ್ಪತ್ರೆಯಾಗಿದ್ದರೂ, ಇತರೆ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿದೆ. ಈ ನಿಟ್ಟಿನಲ್ಲಿ ಇದನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಪ್ರಕ್ರಿಯೆ ನಡೆಸಲು ಅವರು ಸೂಚಿಸಿದರು. ಇದರಿಂದ ಆಸ್ಪತ್ರೆಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲಿದೆ ಎಂದರು.

ರೋಗಿಗಳಿಗೆ ಹೊರಗಡೆ ಔಷಧಿ ಖರೀದಿ: ಡಿಸಿ ಅಸಮಾಧಾನ

  ಫಾರ್ಮೆಸಿ ವಿಭಾಗದಲ್ಲಿ ಔಷಧ ದಾಸ್ತಾನುಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಕನಿಷ್ಠ 3 ತಿಂಗಳಿಗೆ ಬೇಕಾದ ಔಷಧಿಗಳು ದಾಸ್ತಾನಿಟ್ಟು, ಯಾವುದೇ ಸಮಯದಲ್ಲೂ ದೊರಕುವಂತೆ ಸಂಗ್ರಹಿಸಿಡಬೇಕು. ರೋಗಿಗಳು ಹೊರಗಡೆಯಿಂದ ಔಷಧಿ ಖರೀದಿಸಲು ಅವಕಾಶ ನೀಡದಂತೆ ಸೂಚಿಸಿದರು.

 ಇದೇ ಸಂದರ್ಭದಲ್ಲಿ ವೆನ್‍ಲಾಕ್ ಆಸ್ಪತ್ರೆಯ ಫಾರ್ಮೆಸಿಯಲ್ಲಿ ದಾಸ್ತಾನು ಇದ್ದರೂ, ರೋಗಿಯೊಬ್ಬರಿಗೆ ಹೊರಗಡೆಯಿಂದ ಔಷಧಿ ಖರೀದಿಸಲು ಸೂಚಿಸಿದ್ದನ್ನು ಪತ್ತೆ ಹಚ್ಚಿದ ಜಿಲ್ಲಾಧಿಕಾರಿಗಳು, ವೆನ್‍ಲಾಕ್ ಫಾರ್ಮೆಸಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಎಚ್ಚರಿಕೆ ನೀಡಿದರು.

  ಕರ್ನಾಟಕ ಮೆಡಿಕಲ್ ಸಪ್ಲೈ ಡಿಪಾಟ್ಮೆರ್ಂಟ್ ಗಳಲ್ಲಿ ಔಷಧಿಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಅಲ್ಲಿಂದ ಔಷಧಿ ಲಭ್ಯವಿಲ್ಲದಿರುವ ಬಗ್ಗೆ ದೃಢೀಕರಣ ಪತ್ರ ತೆಗೆದುಕೊಂಡು ಆನಂತರ ಮುಂದಿನ ಖರೀದಿ ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

   ವೆನ್‍ಲಾಕ್ ಅಧೀಕ್ಷಕಿ ಡಾ. ಜೆಸಿಂತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಸ್ಥಾನೀಯ ವೈದ್ಯಾಧಿಕಾರಿ ಡಾ. ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ. ರಾಜೇಶ್ವರಿದೇವಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles