ಮಂಗಳೂರು: ಸುಪ್ರೀಂ ಕೋರ್ಟಿನ ಮಾರ್ಗಸೂಚಿಯಂತೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ-2013 ರನ್ವಯ ಸರ್ಕಾರಿ, ಖಾಸಗಿ, ನಿಗಮ ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳು ಇತ್ಯಾದಿ 10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ “ಆಂತರಿಕ ದೂರು ಸಮಿತಿ” ರಚನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಆಂತರಿಕ ದೂರು ಸಮಿತಿ ರಚನೆ ಮಾಡಿರುವ ಹಾಗೂ ರಚನೆ ಆಗದಿದ್ದಲ್ಲಿ ರಚನೆ ಮಾಡಿಸಿ ಮಾಹಿತಿಯನ್ನು ಜುಲೈ 31ರೊಳಗೆ ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀ ಶಕ್ತಿ ಭವನ, ಮೆಸ್ಕಾಂ ಕಟ್ಟಡದ ಬಳಿ, ಬಿಜೈ ಮಂಗಳೂರು ಇಲ್ಲಿಗೆ ಸಲ್ಲಿಸಬೇಕು.
ಕೆಲಸದ ಸ್ಥಳಗಳಲ್ಲಿ “ದೂರು ಪೆಟ್ಟಿಗೆ” ಯನ್ನು ಕಡ್ಡಾಯವಾಗಿ ಅಳವಡಿಸಬೇಕು. 10ಕ್ಕಿಂತ ಕಡಿಮೆ ಸಿಬ್ಬಂದಿಗಳಿದ್ದಲ್ಲಿ ಕೂಡ ಕಡ್ಡಾಯವಾಗಿ ಮಾಹಿತಿಯನ್ನು ಸಲ್ಲಿಸಬೇಕು ಹಾಗೂ 10ಕ್ಕಿಂತ ಕಡಿಮೆ ಸಿಬ್ಬಂದಿಗಳು ಇರುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಂತಹ ಘಟನೆ ಸಂಭವಿಸಿದಲ್ಲಿ ದೂರನ್ನು ಉಪನಿರ್ದೇಶಕರ ಕಛೇರಿಯಲ್ಲಿರುವ ಜಿಲ್ಲಾಮಟ್ಟದ “ಸ್ಥಳೀಯ ದೂರು ಸಮಿತಿ”ಗೆ ನೀಡುವಂತೆ ಸೂಚಿಸಲಾಗಿದೆ.
ಮಾಲೀಕರು ಅಥವಾ ಉದ್ಯೋಗದಾತರು ಈ ಕರ್ತವ್ಯಗಳನ್ನು ನಿರ್ವಹಿಸಲು ತಪ್ಪಿದ್ದಲ್ಲಿ ರೂ. 50,000 ಗಳವರೆಗೆ ದಂಡ ನೀಡಬೇಕಾಗುತ್ತದೆ. ಹಾಗೂ ಇಂತಹ ಕಾರ್ಯಗಳು ಪುನರಾವರ್ತನೆಯಾದಲ್ಲಿ ಪುನರಾವರ್ತಿತ ಅಪರಾಧಿಗಳಿಗೆ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಿರುವ ಪರವಾನಗಿ, ನೋಂದಣಿಗಳನ್ನು ರದ್ದುಗೊಳಿಸಿ ಶಿಕ್ಷೆ ವಿಧಿಸಲಾಗುತ್ತದೆ.
ಇದಕ್ಕೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ವೆಬ್‍ಸೈಟ್ ಞsಛಿತಿ.ಞಚಿಡಿ.ಟಿiಛಿ.iಟಿ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀ ಶಕ್ತಿ ಭವನ ಎರಡನೇ ಮಹಡಿ ಮೆಸ್ಕಾಂ ಭವನ ಹತ್ತಿರ, ಬಿಜೈ, ಮಂಗಳೂರು. ದೂರವಾಣಿ ಸಂಖ್ಯೆ 0824-2451254 ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.