ಮಂಗಳೂರು: ಪ್ರಾದೇಶಿಕ ಚಲನ ಚಿತ್ರಗಳಿಗೆ ಸರಕಾರದಿಂದ ಸಬ್ಸಿಡಿ ನೀಡವಂತೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘ (ರಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್ ಅವರು ಬೆಂಗಳೂರಿನಲ್ಲಿ ಮುಖ್ಯಂಮತ್ರಿಯವರಿಗೆ ಮನವಿ ನೀಡಿದ್ದಾರೆ.
ಕರ್ನಾಟಕದಲ್ಲಿ ವರ್ಷಂಪ್ರತಿ ಸುಮಾರು 15 ರಿಂದ 20 ತುಳು ಸಿನಿಮಾಗಳು ತೆರೆ ಕಾಣುತ್ತಿದೆ. ಪ್ರಾದೇಶಿಕ ಭಾಷೆಗಳ ಅಭಿಮಾನದಿಂದ ನಿರ್ಮಾಪಕರು ಚಲನ ಚಿತ್ರ ನಿರ್ಮಿಸುತ್ತಾರೆ. ಯಾವುದೇ ಪರಭಾಷೆಗೆ ಕಡಿಮೆ ಇಲ್ಲದಂತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾ ನಿರ್ಮಿಸುತ್ತಾರೆ. ಮೂರ್ನಾಲ್ಕು ಸಿನಿಮಾಗಳಿಗೆ ಮಾತ್ರ ಸಬ್ಸಿಡಿ ನೀಡುವ ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಕನಿಷ್ಠ ಹದಿನೈದು ಸಿನಿಮಾಗಳಿಗೆ ಸಬ್ಸಿಡಿ ನೀಡುವಂತೆ ಮನವಿ ನೀಡಿದರು.
ಮಂಗಳೂರಿನಲ್ಲಿ ತುಳು ಚಲನ ಚಿತ್ರ ನಿರ್ಮಾಪಕರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಜಮೀನು ಮಂಜೂರು ಮಾಡುವಂತೆ ಅಧ್ಯಕ್ಷ ಆರ್ ಧನರಾಜ್ ಮನವಿ ಮಾಡಿದರು. ಮಂಗಳೂರು ಹೋಬಳಿಯ ಕೊಡಿಯಾಲ್ ಬೈಲ್ ಎ ಗ್ರಾಮದ ಸರ್ವೆ ನಂಬ್ರ 1554 – 2 ಬಿ ಯಲ್ಲಿ ಖಾಲಿ ಜಮೀನು ಸರಕಾರದ ವಶದಲ್ಲಿದ್ದು, ಆ ಜಮೀನಿನಲ್ಲಿ ಐದು ಸೆಂಟ್ಸ್ ಜಾಗವನ್ನು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿಮಿಸಲು ಜಾಗ ಮಂಜೂರು ಮಾಡಲು ಜಿಲ್ಲಾಧಿಕಾರಿಯವರಿಗೆ ಆದೇಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಯಿತು.
ತುಳು ಚಲನ ಚಿತ್ರ ನಿರ್ಮಾಪಕರ ಸಂಘ ನೀಡಿದ ಮನವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.