ಮಂಗಳೂರು: ದಲಿತೋದ್ಧಾರಕ, ಮಹಾನ್ ಮಾನವತಾವಾದಿ ಕುದ್ಮುಲ್ ರಂಗರಾವ್ ಅವರ 165ನೇ ಜನ್ಮದಿನಾಚರಣೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಗರದ ಅಟಲ್ ಸೇವಾ ಕೇಂದ್ರದಲ್ಲಿ ಪುಷ್ಪಾರ್ಚನೆ ಸಹಿತ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, “ನನ್ನ ಜೀವನದ ಆದರ್ಶ ಹಾಗೂ ದಾರಿ ದೀಪಗಳನ್ನು ಒಂದು ಕ್ಷಣ ನೆನೆಸಿಕೊಂಡರೆ ಅದರಲ್ಲಿ ಕುದ್ಮುಲ್ ರಂಗರಾವ್ ಅವರ ಹೆಸರು ಅಗ್ರಗಣ್ಯ ಸಾಲಿನಲ್ಲಿ ಇರುತ್ತದೆ. ಪ್ರಾತಃಸ್ಮರಣೀಯರಾದ ಪೂಜ್ಯರನ್ನು ನೆನೆಯುವುದೇ ನಮ್ಮ ಪಾಲಿನ ಸೌಭಾಗ್ಯ. ಇವರ ಜನ್ಮದಿನದ ಅಂಗವಾಗಿ ಕ್ಷೇತ್ರದಲ್ಲಿ ನಡೆದ ಅಧಿಕೃತ ನಾಲ್ಕೂ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ, ಒಂದನ್ನೂ ತಪ್ಪಿಸಿಕೊಂಡಿಲ್ಲ. ಇಂತಹ ಶ್ರೇಷ್ಠರಿಗೆ ಗೌರವ ನಮನ ಸಲ್ಲಿಸುವ ಅವಕಾಶವನ್ನು ನಮ್ಮ ಪಾಲಿಕೆ ಸದಸ್ಯರೂ ಸೇರಿದಂತೆ ಯಾರಾದರೂ ತಪ್ಪಿಸಿಕೊಂಡರೆ ಅದು ಘೋರ ಅಕ್ಷಮ್ಯಕ್ಕೆ ಸಮ ಎನ್ನುವುದು ನನ್ನ ಭಾವನೆ. ದಲಿತೋದ್ಧಾರಕ್ಕಾಗಿ ಶ್ರಮಿಸಿದ ಹಲವಾರು ಮಹನೀಯರ ನಡುವೆ ದಲಿತೋದ್ಧಾರಕ್ಕಾಗಿ ಬದುಕನ್ನೇ ಸಮರ್ಪಿಸಿದವರು ರಂಗರಾಯರು”, ಎಂದರು.
ಲೇಖಕ ಯಶವಂತ್ ಕುದ್ರೋಳಿಯವರು ಮಾತನಾಡಿ “ಅಂದಿನ ಕಾಲದಲ್ಲಿದ್ದ ಭಾರೀ ಅಡೆತಡೆಗಳನ್ನು ಮೀರಿ ದಲಿತರಿಗಾಗಿ ಶಾಲೆಗಳನ್ನು ತೆರೆದು ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದ ಕುದ್ಮುಲ್ ರಂಗರಾವ್ ಅವರು ಜಗತ್ತಿನ ಮಹಾನ್ ಸಮಾಜ ಸುಧಾರಕರ ಸಾಲಿನಲ್ಲಿರಬೇಕಿತ್ತು. ಆದರೆ ನಾವು ಇವರ ಕೊಡುಗೆಯನ್ನು ರಾಜ್ಯ ಮಟ್ಟಕ್ಕೂ ತಲುಪಿಸಲು ಮರೆತಿರುವುದು ಬೇಸರದ ಸಂಗತಿ” ಎಂದರು.
ಮೂಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು , ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಲಲ್ಲೇಶ್, ರಮೇಶ್ ಹೆಗ್ಡೆ, ಭರತ್ ಸೂಟರ್ ಪೇಟೆ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು. ರಘುವೀರ್ ಬಾಬುಗುಡ್ಡೆ ಸ್ವಾಗತಿಸಿ ವಂದಿಸಿದರು.