ಮಂಗಳೂರು: ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅಹವಾಲುಗಳಿಗೆ ನಿಗದಿತ ಕಾಲಾವಧಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶದ ಗುಂಡೂರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಶನಿವಾರ ಕಡಬ ತಾಲೂಕು ಆಡಳಿತ ವತಿಯಿಂದ ಕಡಬದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಲು ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾನೂನು ಸಮಸ್ಯೆಗಳಿಲ್ಲದ ಮನವಿಗಳಿಗೆ ಸಕಾಲದಲ್ಲಿ ಪರಿಹಾರ ಒದಗಿಸದೆ ಅಧಿಕಾರಿಗಳು ವಿಳಂಭಿಸುವುದನ್ನು ಸರಕಾರ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು. ಜನತಾದರ್ಶನದಿಂದ ತಳಮಟ್ಟದಲ್ಲಿನ ಸಮಸ್ಯೆಗಳು ಸರಕಾರಕ್ಕೆ ಗೊತ್ತಾಗುತ್ತದೆ. ಜನರ ಕಷ್ಟಗಳನ್ನು ಪರಿಹರಿಸಲು ಸರಕಾರ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಹವಾಲುಗಳಿಗೆ ನಿಗದಿತ ಅವಧಿಯಲ್ಲಿ ಸ್ಪಂದಿಸಬೇಕು ಎಂದು ಸಚಿವರು ತಿಳಿಸಿದರು.
ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಅರಣ್ಯ ಭೂಮಿಯ ಸಮಸ್ಯೆ ಇರುವುದು ತನಗೆ ಅರಿವಿದೆ. ಇದನ್ನು ಕಾನೂನಾತ್ಮಕವಾಗಿ ಪರಿಹರಿಸಲು ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಮತ್ತಿತರರು ಇದ್ದರು.
ಬಳಿಕ ಸಚಿವರು ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ಪ್ರತಿಯೊಬ್ಬರ ಅಹವಾಲು ಆಲಿಸಿದ ಸಚಿವರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸ್ಪಂದಿಸಿ ದರು. ಕೆಲವು ಮನವಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.