ಮಂಗಳೂರು: “ರಂಗ ಸವ್ಯಸಾಚಿ ಕಿಶೋರ್ ಡಿ ಶೆಟ್ಟಿ ನೇತೃತ್ವದ ಶ್ರೀ ಲಲಿತೆ ಕಲಾವಿದರು (ರಿ ) ತಂಡದ ಮೂಲಕ ಪ್ರದರ್ಶನ ಕಾಣಲಿರುವ “ಶನಿ ಮಹಾತ್ಮೆ ” ತುಳು ಪೌರಾಣಿಕ ನಾಟಕವು ತುಳು ರಂಗ ಭೂಮಿಯಲ್ಲಿ ಸಂಚಲನ ಉಂಟು ಮಾಡಲಿದೆ ” ಎಂದು ಕದಿರೆಯ ಕಲಾವಿದರು ಸಂಸ್ಥೆಯ ಅಧ್ಯಕ್ಷ ಗೋಕುಲ್ ಕದ್ರಿ ಹೇಳಿದರು.
ಕದ್ರಿ ಯಲ್ಲಿ ಜರಗಿದ ಕದ್ರಿ ನವನೀತ ಶೆಟ್ಟಿ ವಿರಚಿತ ನೂತನ ಕಲಾಕೃತಿ “ಶನಿ ಮಹಾತ್ಮೆ ” ನಾಟಕದ ಮುಹೂರ್ತ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ” ತುಳು ಪೌರಾಣಿಕ, ಚಾರಿತ್ರಿಕ ನಾಟಕ ಪ್ರದರ್ಶನಗಳಿಗೆ ನೂತನ ವೇದಿಕೆ ಹಾಗೂ ಪ್ರೇಕ್ಷಕರನ್ನು ಸೃಷ್ಟಿಸಿದ ನಿಜ ಅರ್ಥದ ಕಲಾಪೋಷಕ ಕಿಶೋರ್ ಶೆಟ್ಟಿ ” ಎಂದರು.
ಕದ್ರಿ ದೇವಸ್ಥಾನದ ಅರ್ಚಕ ಕೃಷ್ಣ ಅಡಿಗ ಅವರು ಕದ್ರಿಯ ಸಾಮೂಹಿಕ ಶನೀಶ್ವರ ಪೂಜಾ ಸಂಧರ್ಭದಲ್ಲಿ ವಿಶೇಷ ಪ್ರಾರ್ಥನೆ ಮಾಡಿ ” ಶನಿ ದೇವರು ಬೇರೆ ಬೇರೆ ಯುಗಗಳಲ್ಲಿ ತೋರಿದ ಮಹಿಮೆಗಳನ್ನು ನಾಟಕ ರೂಪದಲ್ಲಿ ಶನಿ ದೇವರ ಭಕ್ತರಿಗೆ ಪ್ರಸ್ತುತ ಪಡಿಸುವುದು ಪುಣ್ಯ ಕಾರ್ಯ. ನಾಲ್ಕು ದಶಕಗಳಿಂದ “ಶನೀಶ್ವರ ಮಹಾತ್ಮೆ” ಯಕ್ಷಗಾನ ದಲ್ಲಿ ಅರ್ಥಧಾರಿಯಾಗಿ, ವೇಷಧಾರಿ ಪಡೆದ ಅನುಭವದ ಹಿನ್ನಲೆಯಲ್ಲಿ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ ಈ ನಾಟಕವು ಶನಿ ದೇವರ ಪೂರ್ಣಶೀರ್ವಾದ ಇದೆ ” ಎಂದು ಶುಭ ಹಾರೈಸಿದರು.
ಕಟೀಲ್ದಪ್ಪೆ ಉಳ್ಳಾಲ್ದಿ, ಗರುಡ ಪಂಚಮಿ, ಬೀರೆ ದೇವು ಪೂಂಜೆ, ಕಾರ್ನಿಕದ ಶಿವ ಮಂತ್ರ, ತಿರುಪತಿ ತಿಮ್ಮಪ್ಪೆ, ಮಣ್ಣ್ ದ ಮಗಳ್ ಅಬ್ಬಕ್ಕ ಮೊದಲಾದ 17 ತುಳು, ಕನ್ನಡ ನಾಟಕಗಳ ಸಾವಿರಾರು ಪ್ರದರ್ಶನ ಗಳನ್ನು ದೇಶ ವಿದೇಶಗಳಲ್ಲಿ ನೀಡಿದ ಶ್ರೀ ಲಲಿತೆ ತಂಡದ ಪ್ರಬುದ್ಧ ಕಲಾವಿದರು ಹೊಸ ರಂಗ ವಿನ್ಯಾಸ ದೊಂದಿಗೆ “ಶನಿ ಮಹಾತ್ಮೆ ” ನಾಟಕವನ್ನು ಆಗಸ್ಟ್ ತಿಂಗಳಲ್ಲಿ ಪ್ರದರ್ಶಿಸ ಲಿದ್ದಾರೆ.
ಕಿಶೋರ್ ಡಿ ಶೆಟ್ಟಿ, ಜೀವನ್ ಉಳ್ಳಾಲ್, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ, ತಾರಾನಾಥ್ ಉರ್ವಾ, ಮಂಜು ಕಾರ್ಕಳ, ಯಾದವ ಮಣ್ಣಗುಡ್ಡೆ, ದಿನೇಶ್ ಕುಂಪಲ, ಹರೀಶ್ ಪಣಂಬೂರು, ನವೀನ್ ಶೆಟ್ಟಿ ಅoಬ್ಲಮೊಗರು, ಅಶ್ವಿನಿ, ಸ್ನೇಹ ಕುಂದರ್, ರಾಮಾಚಾರಿ ಮೊದಲಾದ ಕಲಾವಿದರು ಅಭಿನಯಿಸಲಿದ್ದಾರೆ.
” ಜೀವನ್ ಉಳ್ಳಾಲ್ ನಾಟಕ ನಿರ್ದೇಶನ, ಮೋಹನ್ ಕೊಪ್ಪಳ ಕದ್ರಿ ಸಮಗ್ರ ನಿರ್ವಹಣೆಯಲ್ಲಿ ಹೊಸ ರಂಗ ಪರಿಕರ, ವೇಷ ಭೂಷಣ ಗಳೊಂದಿಗೆ “ಶನಿ ಮಹಾತ್ಮೆ ” ನಾಟಕವು ಅಭೂತ ಪೂರ್ವ ಯಶಸ್ಸು ಕಾಣಲಿ ” ಎಂದು ಹಿರಿಯ ಕಲಾವಿದೆ ಸರೋಜಿನಿ ಶೆಟ್ಟಿ ಶುಭ ಹಾರೈಕೆ ಮಾಡಿದರು.ಪ್ರದೀಪ್ ಆಳ್ವ ಕದ್ರಿ ನಿರೂಪಣೆ ಮಾಡಿದರು. ಅಶ್ವಿನಿ ಧನ್ಯವಾದ ಸಮರ್ಪಿಸಿದರು.