ಮಂಗಳೂರು:ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಡೆಂಗ್ಯೂ ನಿರ್ಮೂಲನೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನವಸತಿ ಪ್ರದೇಶ ಹಾಗೂ ತಮ್ಮ ಇಲಾಖಾ ವ್ಯಾಪ್ತಿಯ ಕಟ್ಟಡ, ಆವರಣಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಅವರು ಹೇಳಿದರು.
ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂ ಪ್ರಕರಣಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆಯಲ್ಲಿ ಮಾತನಾಡಿದರು.
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಪ್ರಕರಣಗಳು ಕಂಡು ಬಂದಿದ್ದು, ಪಾಲಿಕೆಯ ಎಂ.ಪಿ.ಡಬ್ಲ್ಯೂ ಸಿಬ್ಬಂದಿಗಳು ಫೀಲ್ಡ್ ಗೆ ಹೋಗಬೇಕು, ಮುಂದಿನ ಎರಡು ದಿನಗಳಲ್ಲಿ ಪ್ರತಿ ವಾರ್ಡ್ಗಳಿಗೆ ಭೇಟಿ ನೀಡಿ ಲಾರ್ವ ಉತ್ಪತ್ತಿಗೆ ಕಾರಣವಾಗುವ ನೀರಿನ ಸಂಗ್ರಹಗಳನ್ನು ಗುರುತಿಸಿ ನಾಶಗೊಳಿಸಲು ಕ್ರಮವಹಿಸಬೇಕು. ಎಲ್ಲಾ ವಾರ್ಡ್ಗಳಿಗೆ ರಾಸಾಯನಿಕ ಸಿಂಪಡಿಸಬೇಕು. ಅಗತ್ಯ ಪ್ರದೇಶದಲ್ಲಿ ಧೂಮೀಕರಣ ನಡೆಸಬೇಕು. ಡೆಂಗೀ ನಿರ್ಮೂಲನೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲಾ ತಾಲೂಕುಗಳ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ಕಮಿಷನರ್ಗಳು ಹಾಗೂ ಆಯಾ ತಾಲೂಕಿನ ಆರೋಗ್ಯಾಧಿಕಾರಿಗಳು ಕೂಡಲೇ ಸಭೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಭೇಟಿ ನೀಡಿ ಲಾರ್ವ ಉತ್ಪತ್ತಿ ಪ್ರದೇಶಗಳನ್ನು ಗುರುತಿಸಿ ಮುಂದಿನ ಎರಡು ದಿನಗಳಲ್ಲಿ ಲಾರ್ವ ನಾಶಪಡಿಸಬೇಕು. ನೀರಿನ ಸಂಗ್ರಹ, ಟಯರ್, ಎಳನೀರು ಸಿಪ್ಪೆಗಳನ್ನು ತೆರವುಗೊಳಿಸಬೇಕು. ಸ್ಥಳೀಯ ಮಟ್ಟದಲ್ಲಿ ಜನರಿಗೆ ಡೆಂಗೀ ಬಗ್ಗೆ ಮಾಹಿತಿಯನ್ನು ನೀಡಬೇಕು, ಜಾಲತಾಣಗಳಲ್ಲಿ, ಕರಪತ್ರಗಳ ಮೂಲಕ ಜಾಗೃತಿ ವಹಿಸಬೇಕು, ಡೆಂಗೀ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಂಬಧಿಸಿದ ಇಲಾಖೆಗಳು ಮಾಹಿತಿ ನೀಡುವಂತೆ ಸೂಚಿಸಿದರು.
ಆಯಾ ತಾಲೂಕುಗಳ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜ್ವರದ ಪ್ರಕರಣಗಳು ಕಂಡು ಬಂದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ಪರೀಕ್ಷೆ ಮಾಡಿಸಬೇಕು. ಡೆಂಗ್ಯೂ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.
ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಇಲಾಖೆಯಿಂದ ಆಯಾ ಪ್ರದೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಶಾಲಾ ಕಾಲೇಜುಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಜ್ವರ ಕಾಣಿಸಿಕೊಂಡ ವಿದ್ಯಾರ್ಥಿಯನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ವಿದ್ಯಾರ್ಥಿಗಳಿಗೆ ಲಾರ್ವ ಉತ್ಪತ್ತಿಯ ಬಗ್ಗೆ ಮಾಹಿತಿ ನೀಡಿ ತಮ್ಮ ತಮ್ಮ ಮನೆಗಳಲ್ಲಿ ಡೆಂಗ್ಯೂ ನಿರ್ಮೂಲನೆಗೆ ಕ್ರಮವಹಿಸುವಂತೆ ಜಾಗೃತಿಯನ್ನು ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಹೇಳಿದರು.
ಶಾಲಾ ಆವರಣದಲ್ಲಿ ಇರುವ ನೀರಿನ ಸಂಗ್ರಹಗಳನ್ನು ಗುರುತಿಸಿ ಶಾಲಾ ಮೈದಾನಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕ. ಪ್ರತಿನಿತ್ಯವೂ ವಿದ್ಯಾರ್ಥಿಗಳು ಉಪಯೋಗಿಸುವ ಶೌಚಾಲಯಗಳನ್ನು ಶುಚಿಗೊಳಿಸಬೇಕು, ಸಾಧ್ಯವಾದರೆ ವಿದ್ಯಾರ್ಥಿಗಳಲ್ಲಿ ಉದ್ದ ತೋಳಿನ, ಮೈ ಕೈ ಮುಚ್ಚುವಂತಹ ಉಡುಪುಗಳನ್ನು ಧರಿಸಲು ತಿಳಿಸಿ ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ, ಡೇ ಕೇರ್ ಸೆಂಟರ್ಗಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಡೆಂಗ್ಯೂ ರೋಗ ಹರಡದಂತೆ ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತರಿಂದ ಗರ್ಭಿಣಿ ಮಹಿಳೆಯರ ಅರೋಗ್ಯ ಸ್ಥಿತಿಗತಿಗಳ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಬೇಕು. ತಮ್ಮ ಆಯಾ ಶಾಲಾ ಕಾಲೇಜು, ಅಂಗನವಾಡಿ ಕೇಂದ್ರ, ಡೇ ಕೇರ್ ಸೆಂಟರ್ ಗಳಲ್ಲಿ ಲಾರ್ವ ಉತ್ಪತ್ತಿಯ ಪ್ರಮಾಣವೂ ಶೂನ್ಯವಾಗಿ ಇರುವ ರೀತಿ ಕ್ರಮ ವಹಿಸಬೇಕು. ತೆಗೆದುಕೊಂಡ ಕ್ರಮಗಳ ಬಗ್ಗೆ ಜಿಪಿಎಸ್ ಫೆÇೀಟೋ ಮುಖಾಂತರ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.
ತಾಯಂದಿರ ಸಭೆಗಳಲ್ಲಿ ಲಾರ್ವಗಳನ್ನು ತೋರಿಸಿ ಮಾಹಿತಿ ನೀಡಬೇಕು, ಕೈ ಬೇವಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು ಎಂದು ಹೇಳಿದರು.
ಹಾಸ್ಟೆಲ್ಗಳಲ್ಲಿ ಶುಚಿತ್ವ ಕಡ್ಡಾಯ
ಎಲ್ಲಾ ಸರಕಾರಿ ಹಾಸ್ಟೆಲ್ಗಳಲ್ಲಿ ಶುಚಿತ್ವ ಕಾಯ್ದುಕೊಳ್ಳುವಂತೆ ತಿಳಿಸಬೇಕು, ವಸತಿ ನಿಲಯಗಳಲ್ಲಿ ಪಾತ್ರೆಗಳನ್ನು ತೊಳೆದ ನೀರಿನ ತ್ಯಾಜ್ಯಗಳನ್ನು ಪ್ರತಿನಿತ್ಯವೂ ಶುಚಿಗೊಳಿಸುವಂತೆ ಆದೇಶಿಸಬೇಕು. ಹಾಸ್ಟೆಲ್ ಸುತ್ತಮುತ್ತ ಬೆಳೆದಿರುವ ಗಿಡ ಗಂಟೆಗಳನ್ನು ಕತ್ತರಿಸಿ ರಾಸಾಯನಿಕವನ್ನು ಸಿಂಪಡಿಸಬೇಕು. ಆರೋಗ್ಯ ಇಲಾಖೆಯಿಂದ ವಿತರಿಸಿದ ಸೊಳ್ಳೆ ಪರದೆಗಳನ್ನು ಬಳಸಬೇಕು. ಪ್ರತಿ ವರ್ಷವೂ ಸೊಳ್ಳೆ ಪರದೆಗಳು ಹಾನಿಯಾಗದಂತೆ, ಕಳೆದುಹೋಗದಂತೆ ಜಾಗೃತರಾಗಿರಬೇಕು. ವಿದ್ಯಾರ್ಥಿ ನಿಲಯದಲ್ಲಿ ಬಳಸುವ ಶೌಚಾಲಯಗಳನ್ನು ಪ್ರತಿನಿತ್ಯ ಶುಚಿಗೊಳಿಸಬೇಕು ಎಂದರು.
ಇತ್ತೀಚೆಗೆ ನಗರಗಳಲ್ಲಿ ರಸ್ತೆ ಕಾಮಗಾರಿಯ ವೇಳೆಯಲ್ಲಿ ಬಳಸಲಾದ ಟ್ಯಾಂಕ್ಗಳಲ್ಲಿ ನೀರಿನ ಸಂಗ್ರಹ ಕಂಡುಬಂದಿದ್ದು ಲಾರ್ವ ಉತ್ಪತ್ತಿಯಾಗುವ ಸಾಧ್ಯತೆಗಳು ಇರುವುದರಿಂದ ಸಂಬಂಧಿಸಿದ ಇಲಾಖೆಯವರು ಕೂಡಲೇ ಅಂತಹ ಟ್ಯಾಂಕ್ ಗಳನ್ನು ಗುರುತಿಸಿ ತೆರವುಗೊಳಿಸಬೇಕು. ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ನೀರಿನ ಸಂಗ್ರಹವಾಗದಂತೆ ಸಂಬಂಧಪಟ್ಟ ಪಿಡಬ್ಲ್ಯೂಡಿ ಇಂಜಿನಿಯರ್ಗಳು ಜಾಗೃತಿ ವಹಿಸಬೇಕು, ನಿರ್ಮಾಣ ಹಂತದ ಕಟ್ಟಡಗಳಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದರು.
ಜಿಲ್ಲಾ ಆರೋಗ್ಯಾಧಿüಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನಸಿರ್ಂಗ್ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.