ಮಂಗಳೂರು : ಮಕ್ಕಳಲ್ಲಿ ದೇವರನ್ನು ಕಾಣುವ ಶ್ರೇಷ್ಠ ಸಂಪ್ರದಾಯ ಭಾರತೀಯರಲ್ಲಿದೆ. ಅವಕಾಶ ವಂಚಿತ ಮಕ್ಕಳಿಗೆ ಆಸರೆ ನೀಡಿ ಅವರ ಶಿಕ್ಷಣಕ್ಕೆ ನೆರವಾಗುವುದು ದೇವತಾ ಸೇವೆಗೆ ಸಮನಾದ ಪುಣ್ಯದ ಕಾರ್ಯ ಎಂದು ಅನಿವಾಸಿ ಭಾರತೀಯ, ಸಮಾಜ ಸೇವಕ ಮೋಹನ್‌ದಾಸ್ ಕಾಮತ್ ಮಂಜೇಶ್ವರ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಜೆಪ್ಪುವಿನ ಭಗಿನಿ ಸಮಾಜದ ಮಕ್ಕಳಿಗೆ ಏರ್ಪಡಿಸಿದ ಸಹಭೋಜನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ಮಂಗಳೂರಿನ ಭಗಿನ ಸಮಾಜ ಕಳೆದ ಹಲವು ದಶಕದಿಂದ ಕೈಗೊಂಡಿರುವ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ‘ಮಕ್ಕಳುನಾಳಿನ ರೂವಾರಿಗಳಾಗಿದ್ದು ಅವರ ಭವಿಷ್ಯ ಉಜ್ವಲಗೊಳಿಸುವುದು ಸಮಾಜದ ಜವಾಬ್ದಾರಿ ’ಎಂದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಇರಾ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.