ಮಂಗಳೂರು: ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜುಲೈ 28ರಂದು ಶ್ರೀ ನಂದಿಕೇಶ್ವರ ನಾಟಕ ಸಂಘದ 40ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯಿಂದ ರಾತ್ರಿ 10ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಬಳಿಕ “ಮುದುಕನ ಮದುವೆ” ತುಳು ಕನ್ನಡ ಮಿಶ್ರಿತ ಹಾಸ್ಯ ನಾಟಕದ ಉಚಿತ ಪ್ರದರ್ಶನ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಯುಗಪುರುಷ ಪತ್ರಿಕೆ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದಾದ್ಯಂತ ಹೆಸರುವಾಸಿಯಾಗಿರುವ ಶ್ರೀ ನಂದಿಕೇಶ್ವರ ನಾಟಕ ಸಂಘವು ದಿ. ಪಿ.ಬಿ. ರೈ ಅವರ ಸವಿನೆನಪಿಗಾಗಿ 40ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುದುಕನ ಮದುವೆ ಅನ್ನುವ ನಾಟಕವನ್ನು ಆಯೋಜಿಸಿದ್ದಾರೆ. ಹಿಂದೆ ಈ ನಾಟಕ ಜನರ ಮನಸ್ಸನ್ನು ಗೆದ್ದಿದ್ದು ಈಗ ಮತ್ತೊಮ್ಮೆ ಗ್ರಾಮೀಣ ಭಾಗದಲ್ಲಿ ಜನರನ್ನು ಸೆಳೆಯುವಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಸಹಕಾರ ಖಂಡಿತ ಬೇಕು“ ಎಂದರು.
ಬಳಿಕ ಮಾತಾಡಿದ ಶೋಭಾ ರೈ ಅವರು, ”ಹಿಂದೆ ಮುದುಕನ ಮದುವೆ ನಾಟಕದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ನಾಡಿದ್ದು ನಡೆಯಲಿರುವ ನಾಟಕದಲ್ಲಿ ಬಣ್ಣ ಹಚ್ಚಲಿದ್ದಾರೆ. ದೀಪಕ್ ರೈ ಪಾಣಾಜೆ, ರಾಘವೇಂದ್ರ ರೈ, ಕವಿತಾ ಚನ್ನಪಟ್ಟಣ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಘವೇಂದ್ರ ರೈ, ಶಿಲ್ಪಾ, ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.