ಬೆ೦ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಟೆಂಪಲ್ ಟೂರಿಸಂ ಬಗ್ಗೆಯೂ ವಿಶೇಷ ಗಮನ ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಅಧಿವೇಶನದ ವೇಳೆ ಸರ್ಕಾರದ ಗಮನ ಸೆಳೆದರು.
ದೇಶದ ಪ್ರಸಿದ್ಧ ತೀರ್ಥಕ್ಷೇತ್ರಗಳಂತೆ ಕರಾವಳಿಯಲ್ಲೂ ಸುಪ್ರಸಿದ್ಧ ತೀರ್ಥಕ್ಷೇತ್ರಗಳಿವೆ. ಇಲ್ಲಿನ ದೈವ-ದೇವರುಗಳಿಗೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ಹೀಗಾಗಿ ಪ್ರತಿವರ್ಷ ಸಾವಿರಾರು ಭಕ್ತರು ರಸ್ತೆ, ಜಲ, ವಾಯು ಸಾರಿಗೆಗಳನ್ನು ಬಳಸಿಕೊಂಡು ಇಲ್ಲಿನ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿಗೆ ಭೇಟಿ ನೀಡುವವರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟರೆ ಕರಾವಳಿ ಧಾರ್ಮಿಕ ಟೂರಿಸಂಗೆ ಹೇರಳ ಅವಕಾಶವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಎಚ್. ಕೆ .ಪಾಟೀಲ್ ರವರು ಟೆಂಪಲ್ ಟೂರಿಸಮ್ ಗೆ ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಈ ಮೂರೂ ಜಿಲ್ಲೆಗಳು ನೀಡಿರುವ ಕೊಡುಗೆ ಬಹಳಷ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕೆಲವೇ ತಿಂಗಳಲ್ಲಿ ಬರಲಿರುವ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಶಾಸಕ ಕಾಮತ್ ಅವರು ಉಲ್ಲೇಖಿಸಿದ ಕರಾವಳಿಯ ಟೆಂಪಲ್ ಟೂರಿಸಂಗೂ ವಿಶೇಷ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.