ಮ೦ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರವೂ ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದ್ದು ಜಿಲ್ಲೆಯ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ 300 ಕೋಟಿ ರೂಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರ್ಕಾರವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಳೆ ಹಾನಿಯ ಬಗ್ಗೆ ಸಮೀಕ್ಷೆಯನ್ನು ನಡೆಸಿ ಹೋಗಿದ್ದಾರೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆ ಹಾನಿಯ ಬಗ್ಗೆ ಸಭೆ ನಡೆಸಿ ಹೋಗಿದ್ದರು. ಆ ಸಭೆಯಲ್ಲಿ ಶಾಸಕರಿಂದ ಹಿಡಿದು ಹಲವು ಅಧಿಕಾರಿಗಳು ಮಳೆ ಹಾನಿಯಿಂದ ಉಂಟಾಗಿರುವ ಅನೇಕ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಆ ಸಮಸ್ಯೆಗಳಿಗೆ ಈವರೆಗೆ ಯಾವುದೇ ಪರಿಹಾರ ಕ್ರಮ ಕೈಗೊ೦ಡಿಲ್ಲ. ವಾಸ್ತವದಲ್ಲಿ ಆ ಎಲ್ಲಾ ಸಮಸ್ಯೆಗಳು ಇನ್ನೂ ಕೂಡಾ ಹಾಗೆಯೇ ಇವೆ ಎ೦ದರು.
ಕಳೆದ 15 ತಿಂಗಳಿನಿಂದಲೂ ಸರ್ಕಾರ ಮಂಗಳೂರು ನಗರ ದಕ್ಷಿಣವೂ ಸೇರಿದಂತೆ ಇಡೀ ಜಿಲ್ಲೆಗೆ ಒಂದು ಪೈಸೆ ಅನುದಾನವನ್ನೂ ಕೊಟ್ಟಿಲ್ಲ. ಕೊನೆಪಕ್ಷ ಪ್ರಕೃತಿ ವಿಕೋಪದಂತಹ ಈ ಸಂದರ್ಭದಲ್ಲಾದರೂ ಜಿಲ್ಲೆಗೆ ನ್ಯಾಯವಾಗಿ ಸಿಗಬೇಕಿರುವ ಅನುದಾನವನ್ನು ಬಿಡುಗಡೆಗೊಳಿಸಿದರೆ ತ್ವರಿತಗತಿಯಲ್ಲಿ ಈ ಹಿಂದಿನಂತೆ ಜಿಲ್ಲೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಜಿಲ್ಲೆಯ ತೆರಿಗೆಯ ದುಡ್ಡನ್ನಾದರೂ ಮರಳಿ ನೀಡಿ ಅಭಿವೃದ್ಧಿಗೆ ಸಹಕಾರ ನೀಡಿ. ಅಲ್ಲದೇ ಕೇವಲ ಕಾಟಾಚಾರಕ್ಕೆ ನಡೆಸುವ ಸಮೀಕ್ಷೆಯಿಂದ ಜಿಲ್ಲೆಗೆ ಏನೂ ಉಪಯೋಗವಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲೆಗೆ ಅನ್ಯಾಯವೆಸಗದೇ ಕೂಡಲೇ 300 ಕೋಟಿ ರೂಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲೆಯಲ್ಲಿ ಎಷ್ಟೋ ವರ್ಷಗಳಿಂದ ಇರುವ ಡೆಂಗ್ಯೂ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ಸಂಪೂರ್ಣ ವಿಫಲವಾಗಿದ್ದು ಜಿಲ್ಲೆಯಲ್ಲಿ ನಿಖರವಾಗಿ ಎಷ್ಟು ಡೆಂಗ್ಯೂ ಪ್ರಕರಣಗಳಿವೆ ಎಂಬುದೇ ತಿಳಿಯುತ್ತಿಲ್ಲ. ಅಷ್ಟರಮಟ್ಟಿಗೆ ಡೆಂಗ್ಯೂ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು ಬೇಜವಾಬ್ದಾರಿತನಕ್ಕೆ ಉದಾಹರಣೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್, ರಮೇಶ್ ಹೆಗ್ಡೆ, ಮನಪಾ ಸದಸ್ಯೆ ಪೂರ್ಣಿಮಾ, ಪ್ರಮುಖರಾದ ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.