ಮೂಡುಬಿದಿರೆ: ‘ಪತ್ರಕರ್ತರ ನಡುವಿನ ಸೂಪರ್ ಸ್ಟಾರ್ ಮನೋಹರ ಪ್ರಸಾದ್’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬಣ್ಣಿಸಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲ್ಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ನಡೆದ ‘ಮನೋಹರ ಪ್ರಸಾದ್ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರು ಪತ್ರಕರ್ತರಿಗಿಂತ ಹೆಚ್ಚಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಂತೆ ಜನಮಾನಸದಲ್ಲಿ ಬೆರೆತು ಹೋಗಿದ್ದರು. ಅವರದ್ದು ಬಹುಮುಖಿ ವ್ಯಕ್ತಿತ್ವ. ಅವರ ಹೆಸರನ್ನು ವಿರಾಸತ್ ನಲ್ಲಿ ನಾವು ಈ ಬಾರಿ ಸ್ಮರಿಸಿಕೊಳ್ಳುತ್ತೇವೆ ಎಂದರು.
ನಾನು ಮತ್ತು ಮನೋಹರ್ ಸಮಕಾಲೀನರು ಹಾಗೂ ಗ್ರಾಮೀಣ ಸ್ಪಂದನೆಯವರು. ನಮ್ಮದು ಹುಚ್ಚು ಮನಸ್ಸಿನ ಹತ್ತು ಮುಖಗಳು. ಮನೋಹರ್ ಶಿಕ್ಷಕ ಆಗಿರಬೇಕಿತ್ತು ಎಂದರು.
ಅಪೂರ್ವ ಜ್ಞಾಪಕ ಶಕ್ತಿ. ಸಮಯಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದ ಅವರೊಂದು ವಿಶ್ವಕೋಶ. ಖ್ಯಾತ ನಟ ಮಮ್ಮುಟ್ಟಿ ಮಂಗಳೂರಿಗೆ ಬಂದಿದ್ದಾಗ ಅವರು ಸಂದರ್ಶನ ಮಾಡಿದ್ದರು. ಅದನ್ನು ನೋಡಿದ ಮಮ್ಮುಟ್ಟಿ ಶ್ಲಾಘಿಸಿದ್ದರು ಎಂದು ಆಳ್ವ ಅವರು ನಪಿಸಿಕೊಂಡರು. ನಿರೂಪಕನಾಗಿ ಭಾಷೆ ಮೇಲಿನ ಹಿಡಿತ ಹಾಗೂ ಸ್ವರ ಮಾಧುರ್ಯ ಗಮನ ಸೆಳೆಯುತ್ತಿತ್ತು. ನುಡಿಸಿರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅದನ್ನು ಕೇಳುವುದೇ ಸೊಗಸಾಗಿತ್ತು ಎಂದರು.
ಸುಮಾರು 5 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 22 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 9 ಮಸ್ತಕಾಭಿಷೇಕ ನಿರೂಪಣೆ ಹಾಗೂ ಆಕಾಶವಾಣಿಯಲ್ಲಿ ಸುಮಾರು 91 ಕಾರ್ಯಕ್ರಮ ನೀಡಿದ್ದರು ಎಂದು ಸ್ಮರಿಸಿದರು.
ಅವರ ಕುಗ್ರಾಮ ಗುರುತಿಸುವ ಬರಹವು ಶ್ರೇಷ್ಠವಾಗಿದೆ. ಕೌಟುಂಬಿಕವಾಗಿ ಒಡಹುಟ್ಟಿದವರನ್ನು ಕಳೆದುಕೊಂಡು ನೋವುಂಡರೂ, ಒಂಟಿಯಾಗಿ ಜೀವಿಸಿದರು. ಜನರಿಗೆ ಸ್ಪಂದಿಸಿದರು ಎಂದು ನೆನಪಿಸಿಕೊಂಡರು.ಅವರು ತಮ್ಮ ಕೊನೆದಿನಗಳಲ್ಲಿ ನವ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದರು ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಮನೋಹರ ಪ್ರಸಾದ್ ಅವರ ನಿಧನದಿಂದ ಕರಾವಳಿ ಪತ್ರಿಕೋದ್ಯಮದಲ್ಲಿ ಒಂದು ಶ್ರೇಷ್ಠ ಅಧ್ಯಾಯ ಯುಗಾಂತ್ಯ ಕಂಡಿದೆ .ಮನೋಹರ ಅವರು ಬರಹ ಮಾತ್ರವಲ್ಲದೇ ವ್ಯಕ್ತಿತ್ವದ ಮೂಲಕ ಪತ್ರಿಕೋದ್ಯಮಕ್ಕೆ ಹಲವರನ್ನು ಸೆಳೆದವರು.ಮೂರು ತಲೆಮಾರಿನ ಸಾಧಕರನ್ನು ಕಂಡವರು. ಅವರ ಸ್ಮರಣಶಕ್ತಿ ಅದ್ಭುತ. ಅವರಿಗೆ ತಿಳಿಯುವ ಕುತೂಹಲ ಹಾಗೂ ವಿದ್ಯಾರ್ಥಿ ಮನಸ್ಸು ಹೊಂದಿದ್ದರು .ಅವರು ಅವಕಾಶ ಸದ್ಬಳಕೆ ಮಾಡುತ್ತಿದ್ದರು. ವೈವಿಧ್ಯಮಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಕಾರಣ ತುಳುನಾಡಿನ ರಾಯಭಾರಿಯೇ ಆಗಿದ್ದರು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಮನೋಹರ ಪ್ರಸಾದ್ ಅವರ ನೆನಪನ್ನು ಚಿರಸ್ಥಾಯಿಗೊಳಿಸುವ ಕಾರ್ಯಕ್ರಮಗಳನ್ನು ನಮ್ಮ ಸಂಘ ಹಮ್ಮಿಕೊಳ್ಳಲಿದೆ..
ಪತ್ರಕರ್ತರಿಗೆ ರಾಜ್ಯ ಮಟ್ಟದ ಕಾರ್ಯಾಗಾರ, ದತ್ತಿ ಪ್ರಶಸ್ತಿ, ಕ್ರಿಕೆಟ್ ಪಂದ್ಯಾಟ ನಡೆಸುವ ಯೋಜನೆ ಇದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಇಬ್ರಾಹಿಂ ಅಡ್ಕಸ್ಥಳ, ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು, ಭಾಸಕರ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.