ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ದಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆದಿತ್ಯವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, “ಮನೆಮನೆಗೆ ವಿತರಿಸುವ ಪತ್ರಿಕಾ ವಿತರಕರ ಕಾಯಕಕ್ಕೆ ಸರಿಸಾಟಿ ಯಾವುದೂ ಇಲ್ಲ. ಮಳೆ ಇರಲಿ ಚಳಿ ಇರಲಿ ಸಕಾಲಕ್ಕೆ ಪತ್ರಿಕೆ ತಂದು ಮುಟ್ಟಿಸುವ ಇವರಿಗೆ ರಜೆಯೇ ಇಲ್ಲ. ಇಂತಾ ಕಾಯಕವನ್ನು ನಿರಂತರ 62 ವರ್ಷಗಳ ಕಾಲ ಮಾಡಿರುವ ರಮೇಶ್ ಅವರ ಕಾರ್ಯಕ್ಕೆ ಅಭಾರಿ. ಅದೇ ರೀತಿ ಶಿರೂರು ದುರಂತದ ಸಂದರ್ಭ ಮಾನವೀಯ ಕೆಲಸ ಮಾಡಿರುವ ಪತ್ರಕರ್ತರ ಕಾರ್ಯ ರಾಜ್ಯದ ಎಲ್ಲ ಪತ್ರಕರ್ತರಿಗೆ ಹೆಮ್ಮೆ ತಂದಿದೆ. ಅದೇ ರೀತಿ ಬೆಂಗಳೂರಿನ ಅಂಡರ್ ಪಾಸ್ ನಲ್ಲಿ ಕಾರು ನೀರಿಗೆ ಸಿಕ್ಕಿದ ಸಂದರ್ಭದಲ್ಲಿ ಜೀವ ಉಳಿಸಿದ್ದೂ ಕೂಡಾ ಇಬ್ಬರು ಪತ್ರಕರ್ತರು . ಇವರಿಗೆ ಸನ್ಮಾನ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಪತ್ರಕರ್ತರು ಮಾನವೀಯ ಕಾರ್ಯ ಮಾಡಿದಾಗ ಬೆನ್ನುತಟ್ಟಬೇಕಾದ್ದು ನಮ್ಮೆಲ್ಲರ ಕರ್ತವ್ಯ“ ಎಂದರು.
”ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಮೂರು ವರ್ಷಗಳಿಂದ ಸಾಧನೆ ಮಾಡಿದ ಮಕ್ಕಳಿಗೆ ರಾಜ್ಯಮಟ್ಟ, ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಸನ್ಮಾನ ಮಾಡುತ್ತಿದೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಏನಾದರೂ ಅನಾಹುತ ಆದರೆ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುತ್ತಿದೆ“ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು, ಶಿಕ್ಷಣದ ಉದ್ದೇಶವೇನು ಎಂದು ಮಕ್ಕಳಲ್ಲಿ ಪ್ರಶ್ನಿಸಿ ಅವರಿಂದಲೇ ಉತ್ತರ ಪಡೆದರು. ಸಾಮಾಜಿಕ ಕಾಳಜಿಯೊಂದಿಗೆ ಬೆರೆಯುವುದು ಹೇಗೆ ಎನ್ನುವುದನ್ನು ಶಿಕ್ಷಣ ಕಲಿಸುತ್ತದೆ. ಪತ್ರಕರ್ತ ವೃತ್ತಿ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುತ್ತದೆ. ಮಕ್ಕಳಾದ ನೀವು ಇದನ್ನು ಕಂಡುಕೊಂಡರೆ ಅರ್ಥಪೂರ್ಣ ಬದುಕು ನಿಮ್ಮದಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ 64 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ 82ರ ಹರೆಯದ ರಮೇಶ್, ವಿನೂತನ ರೀತಿಯಲ್ಲಿ ಮತದಾನ ಹಾಗೂ ಡೆಂಗ್ಯು ಜಾಗೃತಿ ಮೂಡಿಸಿದ ಸನ್ನಿಧಿ ಕಶೆಕೋಡಿ, ಶಿರೂರು ಗುಡ್ಡ ಕುಸಿತ ಸಂದರ್ಭ ವೃದ್ಧೆಯ ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆಯನ್ನು ಸಾರಿದ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಇಬ್ರಾಹಿಂ ಅಡ್ಕಸ್ಥಳ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಹಿರಿಯ ಪತ್ರಕರ್ತ ಆನಂದ್ ಶೆಟ್ಟಿ, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಭಾಸ್ಕರ್ ರೈ ಕಟ್ಟ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.