ಮಂಗಳೂರು: ಯಾವುದೇ ಜಾತಿ, ಮತದ ಭೇದವಿಲ್ಲದೆ ಅನ್ಯ ಜಾತಿಯವರು ತಮ್ಮ ಮಕ್ಕಳಿಗೆ ಕೃಷ್ಣವೇಷವನ್ನು ಹಾಕುವ ಸನ್ನಿವೇಶವನ್ನು ಕಾಣುತ್ತೇವೆ. ಶ್ರೀಕೃಷ್ಣ ಪರಮಾತ್ಮನ ಆದರ್ಶಗಳು ಜಾತಿ ಮತವನ್ನು ಮೀರಿರುವಂಥದ್ದು. ಎಲ್ಲಾ ಜಾತಿ ಧರ್ಮದವರಿಗೂ ಪ್ರೇರಣೆಯಾಗುವಂತದ್ದು ಎಂದು ಮಂಗಳೂರು ದಕ್ಷಿಣ ಶಾಸಕ ವೇದ ವ್ಯಾಸ್ ಕಾಮತ್ ಹೇಳಿದರು.
ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನಡೆದ ಕೃಷ್ಣ ಜಯಂತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು
ಮುಖ್ಯ ಅತಿಥಿಯಾಗಿದ್ದಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಪುರಾಣದಲ್ಲಿ ನಾವು ಕೇಳಿರುವ ಕಥೆಗಳು, ಅಂಶಗಳು ಯಾವುದು ಕಾಲ್ಪನಿಕ ಅಲ್ಲ. ಇದಕ್ಕೆ ಸರಿಯಾದ ಉದಾಹರಣೆ ಎಂದರೆ ಶ್ರೀಕೃಷ್ಣನ ದ್ವಾರಕ ನಗರವು ಸಮುದ್ರದ ಆಳದಲ್ಲಿ ಪತ್ತೆಯಾಗಿರುವುದು. ಹರೇ ರಾಮ ಹರೇ ಕೃಷ್ಣ ಎನ್ನುವ ಸಂಸ್ಥೆಯು ಪ್ರಪಂಚದಲ್ಲಿ ಬೇರೆ ಬೇರೆ ದೇಶದಲ್ಲಿ ಶ್ರೀ ಕೃಷ್ಣನ ಸಂದೇಶವನ್ನು ಸಾರುತ್ತಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಪ್ರಾಂಶುಪಾಲ ಡಾ. ಶ್ರೀಧರ ಮಣಿಯಾಣಿ ಉಪನ್ಯಾಸ ನೀಡಿ ಭಾರತದ ಕಲಾಪ್ರಕಾರಗಳಾದ ಸಂಗೀತ, ಸಾಹಿತ್ಯ, ನೃತ್ಯ, ದಾಸ ಪರಂಪರೆ ಶ್ರೀ ಕೃಷ್ಣನ ಪ್ರೇರಣೆಯಿಂದ ಬೆಳೆದಿರುವಂತದ್ದು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ ಅವರ ಭಕ್ತಿ ಅವರ ಅವರ ಕರ್ಮ ಅವರನ್ನು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವಂತೆ ಮಾಡುತ್ತದೆ. ಶ್ರೀ ಕೃಷ್ಣನ ಜನನದ ಉದ್ದೇಶವೇ ದುಷ್ಟ ಸಂಹಾರ ಶಿಷ್ಟ ಸಂರಕ್ಷಣೆ ಎಂದು ಅವರು ಹೇಳಿದರು.
ಸೌರಭ ಕಲಾ ಪರೀಷತ್, ಡಾ. ಶ್ರೀ ವಿದ್ಯಾ ಮುರುಳಿಧರ್ ಶಿಷ್ಯ ವೃಂದ ಇವರ ವತಿಯಿಂದ ಶ್ರೀ ಕೃಷ್ಣ ಲಹರಿ ನೃತ್ಯಾವಳಿ ಹಾಗೂ ನೃತ್ಯ ಸೌರಭ ನಾಟ್ಯಲಯ, ವಿದ್ವಾನ್ ಪ್ರಮೋದ್ ಉಳ್ಳಾಲ ಶಿಷ್ಯ ವೃಂದದ ವತಿಯಿಂದ ಶ್ರೀ ಕೃಷ್ಣ ಲೀಲೆ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ತಾರಾನಾಥ್ ಗಟ್ಟಿ ಕಾಪಿಕಾಡ್, ದಕ್ಷಿಣಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘ ಅಧ್ಯಕ್ಷ, ಟಿ ಆರ್ ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಎ. ಕೆ ಮಣಿಯಾಣಿ ಬೆಳ್ಳಾರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಬಬಿತಾ ಲತೀಶ್ ನಿರೂಪಿಸಿ ವಂದಿಸಿದರು.