ಮಂಗಳೂರು: ಪ್ರೆಸ್ ಕ್ಲಬ್ ಮಂಗಳೂರು ಹೊರತರುತ್ತಿರುವ “ಮಂಗಳೂರು ಸಮಾಚಾರ” ಪತ್ರಿಕೆಯ ತೃತೀಯ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ ಶನಿವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಜರುಗಿತು.
ಹಿರಿಯ ಪತ್ರಕರ್ತರು, ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ ಅವರು ದೀಪ ಬೆಳಗಿಸಿದರು. “ಮೂರು ತಿಂಗಳಿಗೊಮ್ಮೆ ಪತ್ರಿಕೆಯನ್ನು ಹೊರತರುತ್ತಿರುವುದು ಒಳ್ಳೆಯ ವಿಚಾರ. ಸರಕಾರದಿಂದ ಪತ್ರಕರ್ತರಿಗೆ ಸಿಗುವ ಸೌಲಭ್ಯ ಮತ್ತು ಅವಕಾಶಗಳ ಬಗ್ಗೆಯೂ ಪತ್ರಿಕೆಯಲ್ಲಿ ವರದಿ ಪ್ರಕಟಿಸಬೇಕು. ಇದರಿಂದ ಪತ್ರಕರ್ತರಿಗೆ ಬಹಳಷ್ಟು ಅನುಕೂಲವಾಗಲಿದೆ. ಸಂಕಷ್ಟದಲ್ಲಿರುವ ಪತ್ರಕರ್ತರನ್ನು ಗುರುತಿಸಿ ನೆರವಿನ ಹಸ್ತ ಚಾಚುವುದಕ್ಕೂ ಪತ್ರಿಕೆ ಬೆಂಬಲ ನೀಡಬೇಕು“ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತರ್ಜನಿ ಕಮ್ಯುನಿಕೇಷನ್ ನ ಸಂಜಯ್ ಪ್ರಭು ಮಾತನಾಡಿ, ”ಪ್ರೆಸ್ ಕ್ಲಬ್ ಹೊರತರುವ ಪತ್ರಿಕೆ ತಿಂಗಳಿಗೊಮ್ಮೆ ಬಿಡುಗಡೆಯಾಗಲಿ.ಎಂದರು.
ವೇದಿಕೆಯಲ್ಲಿ ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಅಣ್ಣು ಮಂಗಳೂರು, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ
ಶ್ರೀನಿವಾಸ್ ಇಂದಾಜೆ, ಇಬ್ರಾಹಿಂ ಅಡ್ಕಸ್ಥಳ ಮತ್ತಿತರರು ಉಪಸ್ಥಿತರಿದ್ದರು. ಆರ್.ಸಿ. ಭಟ್ ಅತಿಥಿಗಳನ್ನು ಸ್ವಾಗತಿಸಿದರು. ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.