ಮ೦ಗಳೂರು: “ಜೀವನಾನುಭವಕ್ಕಿಂತ ದೊಡ್ಡ ವಿಶ್ವವಿದ್ಯಾಲಯ ಇನ್ನೊಂದಿಲ್ಲ. ಕೊಂಕಣಿ ಭಾಷೆ, ಸಾಹಿತ್ಯ, ಕಲೆಯನ್ನು ಬೆಳೆಸುವಲ್ಲಿ ಜೀವಾನಾನುಭವದ ವಿಶ್ವವಿದ್ಯಾಲಯದಲ್ಲಿ ಕಲಿತ ಹವ್ಯಾಸಿಗಳು, ವಿಶ್ವವಿದ್ಯಾಲಯದ ವಿದ್ವಾ೦ಸರಿಗಿಂತಲೂ ತುಸು ಜಾಸ್ತಿಯೇ ದೇಣಿಗೆ ನೀಡಿದ್ದಾರೆ. ಮಂಗಳೂರು, ಮುಂಬಯಿ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದು, ಕೊಂಕಣಿ ನಾಟಕ, ಕಲೆ, ನಿರೂಪಣೆ, ಸಂಗೀತ – ಹೀಗೆ ಕೊಂಕಣಿಯ ಬಹುತೇಕ ಕ್ಷೇತ್ರಗಳಿಗೂ ಆರು ದಶಕಗಳಿಗಿಂತಲೂ ಹೆಚ್ಚು ಸೇವೆ ನೀಡಿರುವ ಎಡ್ಡಿ ಸಿಕ್ವೇರಾ ನಾಟಕಗಳಲ್ಲಿ ಕರಾವಳಿಯ ಕೊಂಕಣಿಗರ ಜನಜೀವನ ಮತ್ತು ಏರು ಪೇರುಗಳ ಪ್ರತಿಫಲನ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ’ನವ್ – ರಂಗ್’ ಕೃತಿ ಗಮನಾರ್ಹ” ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಫಾ| ಡಾ| ಪ್ರವೀಣ್ ಮಾರ್ಟಿಸ್ ಅಭಿಪ್ರಾಯಪಟ್ಟರು.
ಸಂತ ಅಲೋಶಿಯಸ್ ಪ್ರಕಾಶನದ 28 ನೇ ಪುಸ್ತಕ, ಹಿರಿಯ ರಂಗಕರ್ಮಿ ಎಡ್ಡಿ ಸಿಕ್ವೇರಾ ಅವರ ’ನವ್ ರಂಗ್’ ಕೊಂಕಣಿ ನಾಟಕ ಮತ್ತು ಲೇಖನಗಳ ಸಂಗ್ರಹವನ್ನು ಸಹೋದಯ ಸಭಾಗೃಹದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಪುಸ್ತಕಕ್ಕೆ ಮುದ್ರಣ ಅನುದಾನ ನೀಡಿರುವ ಮೈಕಲ್ ಡಿ ಸೊಜಾ ಟ್ರಸ್ಟ್ ಇದರ ಸಲಹೆದಾರ ಸ್ಟೀಫನ್ ಪಿಂಟೊ ಮತ್ತು ಕಿಟಾಳ್ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕ ಎಚ್. ಎಮ್. ಪೆರ್ನಾಲ್ ಗೌರವ ಅತಿಥಿಗಳಾಗಿದ್ದರು.
ಪುಸ್ತಕದಲ್ಲಿನ ಆಯ್ದ ನಾಟಕದ ಕೆಲವು ದೃಶ್ಯಗಳನ್ನು ಈ ಸಂದರ್ಭದಲ್ಲಿ ಕೃತಿಕಾರ ಎಡ್ಡಿ ಸಿಕ್ವೇರಾ ವಾಚನ ಮತ್ತು ಅಭಿನಯದ ಮೂಲಕ ಪ್ರಸ್ತುತ ಪಡಿಸಿದರು. ಖ್ಯಾತ ರಂಗ ಕಲಾವಿದೆ ಜೀನಾ ಬ್ರ್ಯಾಗ್ಸ್ ಅಭಿನಯ, ವಾಚನದಲ್ಲಿ ಜೊತೆ ನೀಡಿದರು. ಖ್ಯಾತ ರಂಗ ನಿರ್ದೇಶಕ ಕ್ರಿಸ್ಟೋಫರ್ ನೀನಾಸಂ ಧ್ವನಿ – ಬೆಳಕು ಸಂಯೋಜನೆಯಲ್ಲಿ ಸಹಕಾರ ನೀಡಿದರು. ಅಲೋಶಿಯಸ್ ಪ್ರಕಾಶದ ಮುಖ್ಯಸ್ಥೆ ಡಾ| ವಿದ್ಯಾ ವಿನುತ ಡಿ ಸೊಜಾ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕವಿ – ಚಿಂತಕ ಟೈಟಸ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರ ಎಡ್ಡಿ ಸಿಕ್ವೇರಾ ಇವರ ಪತ್ನಿ ಜೋಯ್ಸ್ ಸಿಕ್ವೇರಾ ಮತ್ತು ಪುತ್ರಿ ಡಾ| ಜೊಯೆನ್ ಸಿಕ್ವೇರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.