ಮಂಗಳೂರು: ವಿದ್ಯಾರ್ಥಿ ಸಮುದಾಯದಲ್ಲಿ ಕ್ರೀಡೆಯ ಆಸಕ್ತಿಯನ್ನು ಬೆಳೆಸಿ ಉತ್ತೇಜನ ನೀಡುವ ಮಹತ್ವಕಾಂಕ್ಷೆಯ ನಿರ್ಧಾರವನ್ನು ಕೆನರಾ ಶಿಕ್ಷಣ ಸಂಸ್ಥೆ ಮಾಡಿರುವುದು ಅತ್ಯಂತ ಶ್ಲಾಘನೀಯ. ತಾನು ಕೂಡ ಈ ಶಿಕ್ಷಣ ಸಂಸ್ಥೆಯಲ್ಲಿ ತನ್ನ ಹೈಸ್ಕೂಲ್ ಜೀವನವನ್ನು ಕಳೆದಿದ್ದೇನೆ ಎಂಬುದು ಹೆಮ್ಮೆಯ ಸಂಗತಿ.ಇಂದು ಕ್ರೀಡೆಗೆ ಅತ್ಯಂತ ಹೆಚ್ಚಿನ ಮಹತ್ವ ಇದ್ದು ಕಠಿಣ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಅತ್ಯುನ್ನತ ಸ್ಥಾನವನ್ನು ಈ ಕ್ಷೇತ್ರದಲ್ಲಿ ಗಳಿಸಬಹುದು ಎಂದು ಭಾರತದ ಅತ್ಯುತ್ತಮ ಕ್ರೀಡಾಪಟು ಎಂ ಆರ್ ಪೂವಮ್ಮ ಹೇಳಿದರು.
ಅವರು ಕೆನರಾ ಶಿಕ್ಷಣ ಸಂಸ್ಥೆ ಸ್ಥಾಪಿಸುತ್ತಿರುವ ಕೆನರಾ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೆನರಾ ನಂದಗೋಕುಲ ಹಾಗೂ ಇಂಟರ್ನ್ಯಾಷನಲ್ ಶಾಲೆಯ ಟರ್ಫ್ ಕ್ರೀಡಾ ಚೌಕಟ್ಟನ್ನು ವಿದ್ಯಾರ್ಥಿಗಳೊಂದಿಗೆ ಆಟ ಆಡುವುದರ ಮೂಲಕ ಉದ್ಘಾಟಿಸಿದರು.
ಸಂಸ್ಥೆಯ ಶಾಲಾ ಬ್ಯಾಂಡ್ ತಂಡ, ಎನ್ ಸಿ ಸಿ, ಕರಾಟೆತಂಡ, ಡೊಳ್ಳು ಕುಣಿತ,ಕ್ರೀಡಾಪಟು ವಿದ್ಯಾರ್ಥಿಗಳು ಪಥಸಂಚಲನದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಎಂ ಆರ್ ಪೂವಮ್ಮ ರ ಕ್ರೀಡಾ ಜಗತ್ತಿನ ಸಾಕ್ಷ ಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಕೆನರಾ ಆಡಳಿತ ಮಂಡಳಿಯ ಗೌರವಾನ್ವಿತ ಕಾರ್ಯದರ್ಶಿ ಎಂ ರಂಗನಾಥ್ ಭಟ್ ಮಾತನಾಡಿ ಕೆನರಾ ಸ್ಪೋರ್ಟ್ಸ್ ಅಕಾಡೆಮಿಯ ಸ್ಥಾಪನೆ ನಮ್ಮ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು.ಶೈಕ್ಷಣಿಕ ಚಟುವಟಿಕೆಗಳ ಜೊತೆ ಜೊತೆಯಲಿ ಕ್ರೀಡಾ ಕ್ಷೇತ್ರದ ಬೇರೆ ಬೇರೆ ವಿಭಾಗ ಗಳಲ್ಲಿ ಆಸಕ್ತಿ ಇರುವ ಪ್ರತಿಭೆಗಳಿಗೆ ಈ ಕೆನರಾ ಸ್ಪೋರ್ಟ್ಸ್ಅಕಾಡೆಮಿ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ ಎಂದು ಹೇಳಿದರು.
ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ ಸುರೇಶ್ ಕಾಮತ್, ಗೌರವಾನ್ವಿತ ಕಾರ್ಯದರ್ಶಿ ಎಂ ರಂಗನಾಥಭಟ್ ಜಂಟಿ ಕಾರ್ಯದರ್ಶಿ ಟಿ ಗೋಪಾಲಕೃಷ್ಣ ಶೆಣೈ, ಸದಸ್ಯರಾದ ನರೇಶ್ ಶೆಣೈ, ಬಸ್ತಿ ಪುರುಷೋತ್ತಮ್ ಶೆಣೈ, ಯೋಗೇಶ್ ಕಾಮತ್ , ಅಶ್ವಿನಿಕಾಮತ್,ವಿಕ್ರಮ್ ಪೈ ,ಕೆನರಾ ಮ್ಯೂಸಿಯಂ ನ ನಿರ್ದೇಶಕರಾದ ಪೈಯ್ಯನ್ನುರು ರಮೇಶ್ ಪೈ ,ಸಂಸ್ಥೆಯ ಪಿ ಆರ್ ಒ ಉಜ್ವಲ್ ಮಲ್ಯ,ಸಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಬೋಧಕ ಬೋಧಕೇತರ ವರ್ಗ, ಸಂಸ್ಥೆಯ ಹಿತೈಷಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆನರಾ ಸಿ ಬಿ ಎಸ್ ಇ ಶಾಲೆಯ ಶಿಕ್ಷಕಿ ಸ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸುಜಾತ ಸ್ವಾಗತಿಸಿದರು.