24.9 C
Karnataka
Friday, November 15, 2024

ಸೆ.15ರಂದು ಬೃಹತ್ ಮಾನವ ಸರಪಳಿ : ಹೆಜಮಾಡಿ ಟೋಲ್ ಗೇಟಿನಿಂದ ಸಂಪಾಜೆವರೆಗೆ 1ಲಕ್ಷಕ್ಕೂ ಜನರು ಅಧಿಕ ಭಾಗಿ

ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯಾದ್ಯಂತ ಬೀದರ್ ಜಿಲ್ಲೆಯಿಂದ ಚಾಮರಾಜನಗರವರೆಗೆ ಸೆಪ್ಟೆಂಬರ್ 15ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಐತಿಹಾಸಿಕ ಮಾನವ ಸರಪಳಿ ನಿರ್ಮಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಲು ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಲ್ಕಿ ತಾಲೂಕಿನ ಹೆಜಮಾಡಿ ಟೋಲ್‍ಗೇಟ್ ನಿಂದ ಸುಳ್ಯ ತಾಲೂಕಿನ ಸಂಪಾಜೆಗೇಟ್ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 130 ಕಿ.ಮೀ ವರೆಗೆ 1 ಲಕ್ಷಕ್ಕೂ ಹೆಚ್ಚು ಜನರಿಂದ ಬೃಹತ್ ಮಾನವ ಸರಪಳಿ ನಿರ್ಮಿಸಲಾಗುತ್ತದೆ.
ಹೆದ್ದಾರಿ ಉದ್ದಕ್ಕೂ ಮಾನವ ಸರಪಳಿ ರಚಿಸಲು ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ವಲಯ ಉದ್ಯಮಗಳು, ಖಾಸಗಿ ವಲಯ, ನಾಗರೀಕ ಸಮಾಜ ಮತ್ತು ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಘಸಂಸ್ಥೆಗಳು, ಹಾದು ಹೋಗುವ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು, ಸ್ವಸಹಾಯ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಎಲ್ಲಾ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅತ್ಯಂತ ಯಶಸ್ವಿಯಾಗಿ ಆಚರಣೆಯಾಗುವಂತೆ ಕೈಜೋಡಿಸಬೇಕು.
ಮಾನವ ಸರಪಳಿ ಹಾದುಹೋಗುವ ಹೆದ್ದಾರಿ ಉದ್ದಕ್ಕೂ ಪ್ರತಿ 100 ಮೀಟರ್ ಗೆ ಒಬ್ಬರಂತೆ – ವಿಭಾಗ ಅಧಿಕಾರಿ, ಪ್ರತಿ 1 ಕಿ.ಮೀ ಒಬ್ಬರಂತೆ ಪ್ರದೇಶ ಅಧಿಕಾರಿ, ಪ್ರತಿ 5 ಕಿ.ಮೀ. ಒಬ್ಬರಂತೆ ತಾಲೂಕು ಅಧಿಕಾರಿ ಅವರನ್ನು ನೇಮಿಸಲಾಗಿದೆ. ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಲು ಸಾಕಷ್ಟು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಮಾನವ ಸರಪಳಿ ರಚನೆಯ ಜೊತೆಗೆ ಜಿಲ್ಲೆಯಾದ್ಯಂತ ಗಿಡನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬೃಹತ್ ಮಾನವ ಸರಪಳಿಯಲ್ಲಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ನಾಗರೀಕರು ಸಕ್ರೀಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles