ಮ೦ಗಳೂರು: ನಗರದ ಖ್ಯಾತ ಮೂಳೆ ರೋಗ ತಜ್ಞ ಹಾಗೂ ಮುಕ್ಕದ ಶ್ರಿನಿವಾಸ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಎಡ್ವರ್ಡ್ ನಜ್ರೆತ್‌ರವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ 50 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಲೇಖಕರ ಸಂಘವು ಸಪ್ಟೆಂಬರ್ 15ರಂದು ನಗರದ ಸಂದೇಶ ಸಭಾಂಗಣದಲ್ಲಿ ಆಯೋಜಿಸಿತ್ತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರೆಸ್ ಮುಖ್ಯ ಅತಿಥಿಗಳಾಗಿದ್ದರು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ. ಮೈಕೆಲ್ ಸಾಂತುಮಯೆರ್ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿಯ ನಿಯತಕಾಲಿಕಗಳಲ್ಲಿ ಕಳೆದ 50 ವರ್ಷಗಳಿಂದ ಜನಸಾಮನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನ ಮತ್ತು ಸಣ್ಣಕಥೆಗಳನ್ನು ಬರೆಯುತ್ತಿರುವ ಡಾ. ಎಡ್ವರ್ಡ್ ನಜ್ರೆತ್‌ರವರ 5 ಸಣ್ಣಕತೆಗಳ ಸಂಗೃಹ, ಆರೋಗ್ಯದ ಕುರಿತಾದ 10 ಪುಸ್ತಕ ಮತ್ತು 2 ಕಾದಂಬರಿಗಳು ಪ್ರಕಟವಾಗಿವೆ. ಅವರ ಸಾಹಿತ್ಯದ ಕುರಿತು ಹಿರಿಯ ಲೇಖಕ ಡೊಲ್ಫಿಲೋಬೊ ಮತ್ತು ಲೇಖಕಿ ಲವಿನಾ ಮಸ್ಕರೇನಸ್ (ಲವಿ, ಗಂಜಿಮಟ)ರವರು ಪ್ರಬ೦ಧ ಮಂಡಿಸಿದರು. ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚ್ಚರ್ಡ್ ಮೊರಾಸ್ ಸ್ವಾಗತಿಸಿ, ಎಡ್ಮಂಡ್ ನೊರೊನ್ಹಾ ವಂದಿಸಿದರು. ಪ್ಲಾವಿಯಾ ಆಲ್ಬುಕರ್ಕ್‍ರವರು ಕೊಂಕಣಿಗೆ ಭಾಷಾಂತರಿಸಿದ ’ರೆಗಿಸ್ಥಾನಚೆಂ ಫುಲ್’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಹೆನ್ರಿ ಮಸ್ಕರೇನಸ್ ಕಾರ್ಯಕ್ರಮವನ್ನು ನಿರೂಪಿಸಿದರು.