ಮ೦ಗಳೂರು: ಹಿಂದೂಗಳ ಪ್ರಮುಖ ಹಬ್ಬ ನವರಾತ್ರಿಗೆ ಮಂಗಳೂರು ವಿವಿ ಕಾಲೇಜಿಗೆ ರಜೆ ಇಲ್ಲ ಎಂಬ ಬಗ್ಗೆ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ದೂರುಗಳು ಬರುತ್ತಿದ್ದು ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆಗ್ರಹಿಸಿದ್ದಾರೆ.
.ಮಂಗಳೂರು ದಸರಾವು ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಸಂದರ್ಭದಲ್ಲಿ ಕಟೀಲು, ಪೊಳಲಿ, ಮಂಗಳಾದೇವಿ, ವೆಂಕಟರಮಣ ದೇವಸ್ಥಾನ, ಗೋಕರ್ಣನಾಥ ಸೇರಿದಂತೆ ಹಲವು ಪ್ರಮುಖ ದೇವಿ ಸನ್ನಿಧಿಗಳಿಗೆ ಕುಟುಂಬ ಸಮೇತ ಭಕ್ತಸಾಗರವೇ ಹರಿದು ಬರುತ್ತದೆ. ಹೀಗಿರುವಾಗ ಕಾಲೇಜುಗಳಿಗೆ ರಜೆ ನೀಡದಿರುವುದು ಹಬ್ಬದ ಸಂಭ್ರಮಕ್ಕೆ ಅಡ್ಡಿಯುಂಟು ಮಾಡಿದಂತಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಲೇಜುಗಳಿಗೂ ರಜೆ ನೀಡಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು. ಈಗ ಕಾಂಗ್ರೆಸ್ ಸರ್ಕಾರವೂ ಅದೇ ಮಾದರಿಯನ್ನು ಅನುಸರಿಸಬೇಕು. ಅಲ್ಲದೇ ಜಿಲ್ಲೆಯಲ್ಲಿ ವಿವಿಧ ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಕಾರ್ಯ ನಿರ್ವಹಿಸುತ್ತಿದ್ದು ಅವರುಗಳಿಗೇ ದಸರಾ ರಜೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಬೇಕು ಎ೦ದವರು ಒತ್ತಾಯಿಸಿದ್ದಾರೆ.