ಮ೦ಗಳೂರು: ಮಂಗಳೂರನ್ನು ಕೇಂದ್ರವಾಗಿಸಿಕೊಂಡು ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬುದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದು ವಿಶೇಷ ಆದ್ಯತೆಯ ಮೇರೆಗೆ ಈ ಕಾರ್ಯಯೋಜನೆ ರೂಪುಗೊಳ್ಳಬೇಕೆಂಬುದು ಶಾಸಕ ವೇದವ್ಯಾಸ ಕಾಮತ್ ರವರು ಆಶಯ ವ್ಯಕ್ತಪಡಿಸಿದರು.
ಪ್ರಸ್ತುತ ಈ ಬೇಡಿಕೆಗೆ ಹೆಚ್ಚು ಬಲ ಬಂದಿದ್ದು ಉಲ್ಲೇಖಿತ ಜಿಲ್ಲೆಗಳ ಅನೇಕ ವ್ಯಾಜ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಕೆಯಾಗುತ್ತಿದ್ದು ಈ ಭಾಗದ ಜನರು ನ್ಯಾಯಕ್ಕಾಗಿ ಬೆಂಗಳೂರಿಗೇ ಹೋಗಬೇಕಾಗಿರುವುದರಿಂದ ಆರ್ಥಿಕ ವೆಚ್ಚವೂ ಅಲ್ಲದೇ ಅನೇಕ ರೀತಿಯ ಅನಾನುಕೂಲತೆಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಪೀಠಕ್ಕಾಗಿ ದ.ಕ ವಕೀಲರ ಸಂಘದ ಮನವಿಯು ನ್ಯಾಯಯೋಜಿತವಾಗಿದೆ ಎಂದರು.
ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಇದು ಸಕಾಲವಾಗಿದ್ದು ತುರ್ತಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಕಾನೂನು ಸಚಿವರುಗಳು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಲ್ಲಿ ಜನತೆಯ ಪರವಾಗಿ ವಿನಂತಿಸುತ್ತಾ ರಾಜ್ಯದ ಚಳಿಗಾಲದ ಅಧಿವೇಶನದಲ್ಲಿಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.