ಸುರತ್ಕಲ್: ಯಕ್ಷಗಾನ ತರಬೇತಿ ಕೇಂದ್ರ “ಯಕ್ಷಸಿರಿ“ ಇದರ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮ ಶುಕ್ರವಾರ ಸಂಜೆ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸುರತ್ಕಲ್ ಬಂಟರ ಸಂಘದ ನಿರ್ದೇಶಕ, ಉದ್ಯಮಿ ಗಿರೀಶ್ ಎಂ.ಶೆಟ್ಟಿ ಕಟೀಲು ಅವರು, “ಯಕ್ಷಗಾನಕ್ಕೆ ಇಂದು ಬಹಳಷ್ಟು ಗೌರವವಿದೆ. ಮಕ್ಕಳು ಇಂದಿನ ಕಾಲದಲ್ಲಿ ಯಾಕೆ ಯಕ್ಷಗಾನ ಕಲಿಯಬೇಕು ಅನ್ನುವ ಬಗ್ಗೆ ನಾವು ಯೋಚಿಸಬೇಕು. ಯಾಕೆಂದರೆ ಈ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಯಕ್ಷಗಾನ ಮಕ್ಕಳ ಸ್ಮರಣಶಕ್ತಿಯ ಜೊತೆ ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಮಾತನಾಡಿ, ಯಕ್ಷಗಾನ ಕಲೆಗೆ ಪಟ್ಲ ಫೌಂಡೇಶನ್ ನಂತಹ ಸಂಘಟನೆಗಳು ಸಾಕಷ್ಟು ಶ್ರಮವಹಿಸುತ್ತಿವೆ. ಸುರತ್ಕಲ್ ಬಂಟರ ಸಂಘ ಕೇವಲ ಬಂಟರಿಗೆ ಮಾತ್ರವಲ್ಲದೆ ಇಡೀ ಪರಿಸರದ ಮಕ್ಕಳಿಗೆ ಯಕ್ಷಗಾನ ಕಲಿಸಲು ಇಂತಹ ಕೇಂದ್ರವನ್ನು ಸ್ಥಾಪಿಸಿರುವುದು ಮೆಚ್ಚುವಂತಹ ವಿಚಾರ“ ಎಂದರು.ಉದ್ಯಮಿ ರಾಘವೇಂದ್ರ ರಾವ್ ಮಾತಾಡಿ, “ಸಣ್ಣ ಮಕ್ಕಳು ತಮ್ಮ ವಯಸ್ಸಿಗೂ ಮೀರಿ ತಮ್ಮಲ್ಲಿನ ಕಲೆಯನ್ನು ಸಾರ್ವಜನಿಕರ ಎದುರು ಪ್ರದರ್ಶನ ಮಾಡಿರುವುದು ಹೆಮ್ಮೆ ಪಡುವ ವಿಚಾರ. ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೋಕಯ್ಯ ಶೆಟ್ಟಿ ಮುಂಚೂರು ಮಾತನಾಡಿ ಪರಿಸರದ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಅರಿವು ಮೂಡಿಸುವ ಬಗ್ಗೆ ಹಾಗೂ ಇಂದಿನ ಯುವ ಜನತೆಗೆ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರದ ತಿಳುವಳಿಕೆ ಬಗ್ಗೆ ಕಳೆದ ಮೂರು ವರ್ಷ ಗಳ ಹಿಂದೆ “ಯಕ್ಷ ಸಿರಿ “ತರಬೇತಿಯನ್ನು ಆರಂಭಿಸಿ ಇದೀಗ 90 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ಪರಿಣಿತರಾಗಿರುತಾರೆ ಎಂದು ತಿಳಿಸಿದರು.
ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ , ಸುಭಾಷಿತ ನಗರ ಅಸೋಸಿಯೇಶನ್ ನ ಕೋಶಾಧಿಕಾರಿ ನರಸಿಂಹ ಸುವರ್ಣ, ಪಟ್ಲ ಫೌಂಡೇಶನ್ ಟ್ರಸ್ಟ್ ನ ಟ್ರಸ್ಟಿ ಧನಂಜಯ ಶೆಟ್ಟಿ ಕಟ್ಲ, ಎಚ್ ಪಿಸಿಎಲ್ ನ ಅಧಿಕಾರಿ ವಾಸು ನಾಯ್ಕ ಎಸ್, ಯಕ್ಷಗುರು ರಾಕೇಶ್ ರೈ ಅಡ್ಕ, ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್. ಪೂಂಜ ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಸುಜೀರ್ ಶೆಟ್ಟಿ ಸೂರಿಂಜೆ, ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯಾ ಎ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಸಿರಿಯ ಸಂಘಟಕಿ ಕವಿತಾ ಪುಷ್ಪರಾಜ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಅವಿನಾಶ್ ಶೆಟ್ಟಿ ವಂದಿಸಿದರು. ಬಿಂದಿಯಾ ಶೆಟ್ಟಿ ಸನ್ಮಾನಿತರ ಪತ್ರ ವಾಚಿಸಿದರು.ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ಯಕ್ಷಸಿರಿ ಕೇಂದ್ರದ 6 ಮಂದಿ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು.ಅಕ್ಷತಾ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷಸಿರಿಯ ವಿದ್ಯಾರ್ಥಿಗಳು ಮತ್ತು ಕಲಾವಿದರ ಕೂಡುವಿಕೆಯೊಂದಿಗೆ“ಕೃಷ್ಣಂ ವಂದೇ ಜಗದ್ಗುರುಂ” ಯಕ್ಷಗಾನ ಬಯಲಾಟ ನಡೆಯಿತು.