ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜರುಗುವ ಮೂರನೇ ವರ್ಷದ ಸ್ಟ್ರೀಟ್ ಫುಡ್ ಫಿಯೇಸ್ಟಾ ಇದರ ದಿನಾಂಕ ಮತ್ತು ಸ್ಥಳದ ಘೋಷಣೆ ನಗರದ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಜರುಗಿತು.
ಮಂಗಳೂರು ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, “ಮೂರನೇ ವರ್ಷದ ಸ್ಟ್ರೀಟ್ ಫುಡ್ ಕಾರ್ಯಕ್ರಮದ ದಿನಾಂಕ ಘೋಷಣೆ ಮಾಡಲು ಇಲ್ಲಿರುವ ದೇವರ ಮಕ್ಕಳ ಎದುರು ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗಿನಿಂದ ಮಕ್ಕಳಿಗೆ ವಿಶೇಷ ಆಹಾರ, ಆಟವಾಡಲು ವ್ಯವಸ್ಥೆ ಕಲ್ಪಿಸಿ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದೇವೆ. ಈ ಬಾರಿ ಜ.15ರಿಂದ 19ರವರೆಗೆ 5 ದಿನಗಳ ಕಾಲ ಸ್ಟ್ರೀಟ್ ಫುಡ್ ಫಿಯೇಸ್ಟಾ ಜರುಗಲಿದೆ. ಕಳೆದ ಬಾರಿಯಂತೆ ನಾರಾಯಣಗುರು ಸರ್ಕಲ್, ಪಬ್ಬಾಸ್ ಐಸ್ ಕ್ರೀಮ್, ಹಿಂದಿ ಪ್ರಚಾರ ಸಮಿತಿ ಸುತ್ತಮುತ್ತಲಿನ ಮಾರ್ಗ ಹಾಗೂ ಕರಾವಳಿ ಉತ್ಸವ ಮೈದಾನದಲ್ಲಿ ಆಹಾರಮೇಳ ಆಯೋಜಿಸಲಾಗಿದೆ. ಇದರ ಜೊತೆಗೆ ಮಕ್ಕಳಿಗೆ ವಿಶೇಷ ಪ್ಲೇ ಏರಿಯಾ, ಮನೋರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರ್ಕೆಸ್ಟ್ರಾ, ಹುಟ್ಟುಹಬ್ಬದ ಆಚರಣೆ, ಸೆಲ್ಫಿ ಜೋನ್ ಸಹಿತ ವಿವಿಧ ಕಾರ್ಯಕ್ರಮಗಳನ್ನು ಸ್ಥಳದಲ್ಲಿ ಆಯೋಜಿಸಲಾಗಿದೆ.
ಪ್ರತಿನಿತ್ಯ ಸಂಜೆ 4ಗಂಟೆಯಿಂದ ರಾತ್ರಿ 10:30ಯವರೆಗೆ ನಡೆಯಲಿದೆ. ಪ್ರಾರಂಭ ಮತ್ತು ಅಂತ್ಯದ ದಿನಗಳಲ್ಲಿ ಮಧ್ಯಾಹ್ನ ಸ್ವಲ್ಪ ಬೇಗನೆ ಪ್ರಾರಂಭಿಸಿ ರಾತ್ರಿ 11 ಗಂಟೆಯವರೆಗೆ ಏರ್ಪಡಿಸಲಾಗಿದೆ. 250ಕ್ಕೂ ಹೆಚ್ಚು ಫುಡ್ ಸ್ಟಾಲ್ ಗಳಲ್ಲಿ ಕರಾವಳಿಯ ವಿಶೇಷ ತಿನಿಸುಗಳು ಮಾತ್ರವಲ್ಲದೆ ಬೇರೆ ಕಡೆಯ ಆಹಾರವನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ. ವೆಜ್ ಮತ್ತು ನಾನ್ ವೆಜ್ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದೆ. ಅಂಗಡಿಗಳನ್ನು ಹಾಕಲು ನೆಲ ಬಾಡಿಗೆ ವ್ಯವಸ್ಥೆ ಹೊರತುಪಡಿಸಿ ಕಳೆದ ಬಾರಿಯಂತೆ ಪ್ರಾಫಿಟ್ ಶೇರಿಂಗ್ ವ್ಯವಸ್ಥೆಯಿಲ್ಲ“ ಎಂದರು.
ನಳಿನ್ ಕುಮಾರ್ ಕಟೀಲ್ ಮಾತನಾಡಿ, “ಮಂಗಳೂರಿನಲ್ಲಿ ಹಿಂದಿನ ಎರಡು ಫುಡ್ ಫೆಸ್ಟಿವಲ್ ಯಶಸ್ವಿಯಾಗಿದ್ದು ಇದರಿಂದ ರಾಜ್ಯದೆಲ್ಲೆಡೆ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇಂತಹ ಜನಮನ್ನಣೆ ಪಡೆದಿರುವ ಕಾರ್ಯಕ್ರಮ ಮಂಗಳೂರಿನಲ್ಲಿ ಆಯೋಜನೆಯಾಗುತ್ತಿರುವುದು ಖುಷಿಯ ವಿಚಾರ. ಕಾರ್ಯಕ್ರಮದ ಮುಹೂರ್ತ ಇಂದು ಚೇತನಾ ವಿಶೇಷ ಶಾಲೆಯಲ್ಲಿ ನಡೆದಿದ್ದು ಮತ್ತೊಮ್ಮೆ ಜನರ ಪ್ರೀತಿಯನ್ನು ಪಡೆಯಲಿ. ಮಂಗಳೂರಿನ ವಿಶೇಷ ಆಹಾರ ಖಾದ್ಯಗಳು ಇಂದು ಎಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದ್ದು ಹೊರಗಿನಿಂದ ಬಂದವರಿಗೆ ಇಲ್ಲಿನ ಸಂಸ್ಕೃತಿ ಸೊಗಡು ಪರಿಚಯಗೊಳ್ಳಲಿ“ ಎಂದರು.
ವೇದಿಕೆಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ್,ನರೇಶ್ ಶೆಣೈ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ಉಪಸ್ಥಿತರಿದ್ದರು.