21.6 C
Karnataka
Thursday, November 14, 2024

“ರಂಗಚಾವಡಿ” ವರ್ಷದ ಹಬ್ಬ, ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

ಸುರತ್ಕಲ್: “ರಂಗಚಾವಡಿ” ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಸುರತ್ಕಲ್ ಇದರ ಸಹಯೋಗದಲ್ಲಿ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.
ಚಲನಚಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ ದೀಪ ಪ್ರಜ್ವಲನೆಗೈದರು. ಬಳಿಕ ಮಾತಾಡಿದ ಅವರು, ರಂಗಚಾವಡಿ ಪ್ರಶಸ್ತಿ ಸ್ವೀಕರಿಸುತ್ತಿರುವ ಹಿರಿಯ ರಂಗಕರ್ಮಿ ಕಿಶೋರ್ ಡಿ. ಶೆಟ್ಟಿ ಅವರದು ಸಾವಿರಾರು ಕಲಾವಿದರಿಗೆ ಸ್ಫೂರ್ತಿ ತುಂಬುವ ವ್ಯಕ್ತಿತ್ವ. ಅವರನ್ನು ಪಡೆದಿರುವುದು ನಮ್ಮ ತುಳುನಾಡಿನ ಸಮಸ್ತ ಕಲಾವಿದರ ಪುಣ್ಯ. ಬಡಹೆಣ್ಣುಮಕ್ಕಳ ಮದುವೆ, ಬಡಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಿಶೋರ್ ಶೆಟ್ಟಿ ಅವರು ಸದಾ ನೆರವು ನೀಡಿದವರು. ಅವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿದೆ. ಸಂಘಟನೆಯ ಈ ಕ್ರಮ ಶ್ಲಾಘನೀಯವಾದುದು“ ಎಂದರು.
ವೇದಿಕೆಯಲ್ಲಿ ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ-2024 ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ನನ್ನ ತಂಡದ ಕಲಾವಿದರಿಂದ ನಾನಿದ್ದೇನೆ, ಅವರಿಲ್ಲದೆ ನಾನೇನೂ ಇಲ್ಲ. ನಾನು ಮಾಡಿರುವ ದಾನ ಧರ್ಮ ಏನೂ ಇಲ್ಲ. ನೊಂದವರಿಗೆ ನೆರವಾಗುವುದು ದೇವರ ಸೇವೆ. ಇದು ನನಗೆ ಅಪ್ಪ ಅಮ್ಮ ಕಲಿಸಿದ್ದು. ಈ ಪ್ರಶಸ್ತಿಯನ್ನು ಬಹಳ ಖುಷಿಯಿಂದ ಸ್ವೀಕರಿಸುತ್ತಿದ್ದೇನೆ. ಇಂತಹ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ“ ಎಂದರು.
ಬಳಿಕ ಮಾತು ಮುಂದುವರಿಸಿದ ಉದ್ಯಮಿ, ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್‌ ಎಂ ಶೆಟ್ಟಿ ಕಟೀಲು ಅವರು, ”ಬಾಳ ಜಗನ್ನಾಥ ಶೆಟ್ಟಿ ಅವರು ರಂಗಭೂಮಿ ಕಲಾವಿದರನ್ನು ಗುರುತಿಸಲು ಹುಟ್ಟುಹಾಕಿದ ರಂಗಚಾವಡಿ ಸಂಘಟನೆ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕಲಾವಿದರನ್ನು ಗುರುತಿಸಿ ಬೆನ್ನು ತಟ್ಟುತ್ತಿರುವ ಇಂತಹ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಉದ್ಯಮಿ, ಸಮಾಜಸೇವಕ ಅನಿಲ್ ಶೆಟ್ಟಿ ತೇವು-ಸೂರಿಂಜೆ, ಬಂಟರ ಸಂಘ ಸುರತ್ಕಲ್ ಇದರ ನಿರ್ದೇಶಕ ಜಗದೀಶ್ ಶೆಟ್ಟಿ ಪೆರ್ಮುದೆ, ಜಯಕಿರಣ ಪತ್ರಿಕೆ ಮಾಲಕ ಪ್ರಕಾಶ್ ಪಾಂಡೇಶ್ವರ್, ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಇದರ ಅಧ್ಯಕ್ಷ ರಮೇಶ್‌ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ಉದ್ಯಮಿ ಜಯರಾಮ ಶೇಖ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ರಂಗಚಾವಡಿ ಸಂಸ್ಥೆಯ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ, ಚಿತ್ರಾ ಜೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗಿರೀಶ್ ಸಾಗರ ದೇವರನ್ನು ಸ್ತುತಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಅಭಿನಂದನಾ ಭಾಷಣಗೈದರು.‌ ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಗಾನಲಹರಿ, ಲಯನ್ ಕಿಶೋರ್ ಶೆಟ್ಟಿಯವರ ಸಾರಥ್ಯದ ಶ್ರೀ ಲಲಿತೆ ಕಲಾವಿದರಿಂದ ನವನೀತ ಶೆಟ್ಟಿ ರಚಿಸಿರುವ “ಶನಿ ಮಹಾತ್ಮೆ” ತುಳು ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles