ಮಂಗಳೂರು ನಗರದ ಬೋಳೂರು ಅಮೃತ ವಿದ್ಯಾಲಯಂ ಆವರಣದಲ್ಲಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ವಿಶೇಷ ಕೃತ್ತಿಕಾ ಪೂಜೆ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಮಂಗಳೂರಿನ ಕಲಾಮೃತ ತಂಡದವರು ನಡೆಸಿಕೊಟ್ಟ ಸುಮಧುರ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಮಾಲಿನಿ ಕೇಶವ ಪ್ರಸಾದ್ ರವರ ಸುಶ್ರಾವ್ಯ ಕಂಠದ ಹಾಡುಗಳು ,ವೈಷ್ಣವಿಯವರ ಸ್ಯಾಕ್ಸೋಫೋನ್ ,ಅಭಿಷೇಕ್ ಸುರತ್ಕಲ್, ಪೂರ್ವಿ ಕಾಮತ್,ದೀಕ್ಷಿತಾ ಮತ್ತು ತಂಡದವರಿಂದ ಮೂಡಿಬಂದ ಭಕ್ತಿ ಭಾವದ ಸ್ವರಮಾಧುರ್ಯ ಜನಮಾನಸದ ಮೆಚ್ಚುಗೆ ಗಳಿಸಿತು.ಬ್ರಹ್ಮಚಾರಿ ರತೀಶ್ ಇವರು ಕೃತ್ತಿಕಾ ನಕ್ಷತ್ರದ ಪ್ರಯುಕ್ತ ಜರುಗುವ ಜ್ಯೋತಿ ಪೂಜೆ ಹಾಗೂ ಭಗವತಿ ಸೇವೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ,ಅಮೃತ ಯುವ ಧರ್ಮಧಾರದ ಪದಾಧಿಕಾರಿಗಳು, ಅಮ್ಮನವರ ಭಕ್ತರು ಮತ್ರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಆಗಮಿಸಿದ ಎಲ್ಲರಿಗೂ ಮಹಾಪ್ರಸಾದ ವಿತರಣೆ ಮಾಡಲಾಯಿತು.