ಮಂಗಳೂರು: ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ದ.ಕ. ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶವು ನಗರದ ಪುರಭವನದಲ್ಲಿ ಜನವರಿ 8ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಮಾವೇಶ ಜರಗಲಿದ್ದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ, ಕರಾವಳಿಯಾದ್ಯಂತ ಮತ್ತು ಇತರೆಡೆಗಳಲ್ಲಿ ವಾಸಿಸುತ್ತಿರುವ ಸುಮಾರು 25 ಲಕ್ಷ ಜನಸಂಖ್ಯೆಯ ಬ್ಯಾರಿ ಜನಾಂಗದ ಗುರುತಿಸುವಿಕೆ, ಸರಕಾರದ ಪರಿಗಣನಾಪೇಕ್ಷ , ಸಾಮಾಜಿಕ ಭದ್ರತೆ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಸಾಮಾಜಿಕ ಶ್ರೇಯೋಭಿವೃದ್ಧಿಯ ಧ್ಯೇಯೋದ್ದೇಶದಿಂದ ಈ ಸಮಾವೇಶವನ್ನುಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಜಿಲ್ಲೆ ಮತ್ತು ಇತರಡೆಗಳಿಂದ ಸ್ಥಳೀಯಾಡಳಿತ ಸಂಸ್ಥೆ ಮತ್ತು ಜಮಾತ್ ಸಂಸ್ಥೆಗಳಿಂದ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ“ ಎಂದರು.
ಜಿಲ್ಲೆಯಾದ್ಯಂತದ ಸುಮಾರು 1200ರಷ್ಟು ಬ್ಯಾರಿ ಜನಾಂಗದ ಪ್ರತಿನಿಧಿಗಳು, ಮುಖ್ಯಸ್ಥರು ಮತ್ತು ಪ್ರಮುಖರು ಭಾಗವಹಿಸಲಿದ್ದಾರೆ .ಕರ್ನಾಟಕ ರಾಜ್ಯ ಆಲೈಡ್ ಮತ್ತು ಹೆಲ್ತ್ ಮಂಡಳಿಯ ಅಧ್ಯಕ್ಷರಾದ ಡಾ| ಯು.ಟಿ.ಇಫ್ತಿಕಾರ್ ಅಲಿ ಫರೀದ್ ರವರು ಅಖಿಲ ಭಾರತ ಬ್ಯಾರಿ ಮಹಾಸಭಾ ಸಂಘಟನೆಯ ಗೌರವ ಅಧ್ಯಕ್ಷರಾಗಿದ್ದು ಅವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ ಎ೦ದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮುಹಮ್ಮದ್ ಶಾಕಿರ್ ಹಾಜಿ, ಮೊಹಮ್ಮದ್ ಹನೀಫ್, ಹಮೀದ್ ಕಿನ್ಯಾ, ಮುಹಮ್ಮದ್ ಮೋನು, ಇ.ಕೆ.ಹುಸೈನ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಅಬ್ದುಲ್ ಖಾದರ್, ಇಬ್ರಾಹಿಂ ಬಾವ ಬಜಾಲ್, ಇಕ್ಬಾಲ್ ಮೂಲ್ಕಿ, ಝಕರಿಯ ಮಲಾರ್, ಮುಹಮ್ಮದ್ ಹನೀಫ್ ದೇರಳಕಟ್ಟೆ, ಮೊಹಮ್ಮದ್ ಸಮೀರ್ ಆರ್.ಕೆ., ಅಶ್ರಫ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.
