ಮಂಗಳೂರು: ಕಲಾ ಶಾಲೆ, ಸ್ವರಾಲಯ ಸಾಧನಾ ಫೌಂಡೇಷನ್ ವತಿಯಿಂದ ಸ್ವರ ಸಂಕ್ರಾಂತಿ ಉತ್ಸವ ಹಾಗೂ ಸ್ವರ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಗದ್ಗುರು ದುರುಧುಂದೇಶ್ವರ ಮಠದ ಶ್ರೀನಿಜಲಿಂಗೇಶ್ವರ ಸ್ವಾಮೀಜಿ, ಈಗಿನ ಆಧುನಿಕ ಸೌಲಭ್ಯ ಬಳಸಿ ಆಧ್ಯಾತ್ಮಿಕವಾಗಿ ಮುನ್ನಡೆಯಬಹುದು. ಇವೆಲ್ಲಾವುಗಳಿಗೆ ಸಂಗೀತವು ಮಹತ್ವದ ಮಾಧ್ಯಮವಾಗಿದೆ. ಕಲಾಸೇವೆಯ ಭಾವವನ್ನು ಮನದಲ್ಲಿಟ್ಟುಕೊಂಡು ಮಾಡುವ ಕಾರ್ಯಕ್ರಮಗಳು ಜನರನ್ನು ಮತ್ತಷ್ಟು ಹೆಚ್ಚು ತಲುಪುತ್ತವೆ ಎಂದು ಹೇಳಿದರು.
ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವ ಸ್ವಾಮೀಜಿ ಮಾತನಾಡಿ, ಸಂಗೀತ ಕೇವಲ ಮನೋರಂಜನೆ ಮಾತ್ರ ಆಗಬಾರದು. ಇದನ್ನೂ ಪ್ರತಿಯೊಬ್ಬರು ತಮ್ಮ ಆತ್ಮ ಉನ್ನತಿಗಾಗಿ ಅಳವಡಿಸಿಕೊಳ್ಳಬೇಕು. ಕಲಾರಂಜನೆಯು ಆತ್ಮಸಾಧನೆಯ ಮಾರ್ಗವಾಗಬೇಕು. ಮಕ್ಕಳಿಗೆ ಪುರಾಣೇತಿಹಾಸ ತಿಳಿಸಲು ಸಂಗೀತ ಒಳ್ಳೆಯ ವೇದಿಕೆ. ಆದ್ದರಿಂದ ಸಂಸ್ಕೃತಿಯ ಪರಿಚಯ ಮಾಡುವ ಕೆಲಸವನ್ನು ಸಂಗೀತ ಗುರುಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ವಿದ್ವಾನ್ ನೈಬಿ ಪ್ರಭಾಕರ್ ಮತ್ತು ವಿದುಷಿ ಸಾವಿತ್ರಿ ಪ್ರಭಾಕರ್ ದಂಪತಿ ಮತ್ತು ವಿದುಷಿ ಶಾರದಾಮಣಿ ಶೇಖರ್ , ವಿದ್ವಾನ್ ರವಿಕುಮಾರ್ ಕುಂಜೂರು ಅವರಿಗೆ ಸ್ವರ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾ ಶಾಲೆ ವಿದ್ಯಾರ್ಥಿಗಳು ವಯಲಿನ್ ವಾದನ ಪ್ರಸ್ತುತ ಪಡಿಸಿದರು. ಬಳಿಕ ವಿದುಷಿ ರಂಜನಿ ಮತ್ತು ವಿದುಷಿ ಗಾಯತ್ರಿ ಅವರಿಂದ ರಸ ಬೈರಾಗ ಸಂಗೀತ ಕಾರ್ಯಕ್ರಮ ನಡೆಯಿತು.
ಹಿರಿಯ ಸಂಗೀತ ವಿದ್ವಾನ್ ಸ್ವರ ರತ್ನ ವಿಠಲ ರಾಮ ಮೂರ್ತಿ, ಸ್ವರಾಲಯದ ಟ್ರಸ್ಟಿ ವಿದ್ವಾನ್ ವಿಶ್ವಾಸ್ ಕೃಷ್ಣ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಸ್ವರಾಲಯದ ಸಾಧನಾ ಫೌಂಡೇಶನ್ ಅಧ್ಯಕ್ಷ ಕೃಷ್ಣ. ಎನ್ ಸ್ವಾಗತಿಸಿದರು. ಆರ್. ಸಿ ಭಟ್ ವಂದಿಸಿದರು. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.