ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವಂತಹ ನಿಟ್ಟಿನಲ್ಲಿ ಅಬಕಾರಿ ಇಲಾಖೆಯಿಂದ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವಾಮದ್ಯ/ಹೊರರಾಜ್ಯದ ಮದ್ಯ/ಡಿಫೆನ್ಸ್ ಮದ್ಯ/ತೆರಿಗೆ ರಹಿತ ವಿದೇಶೀ ಮದ್ಯದ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿದ್ದು, ಜುಲೈ-2024 ರಿಂದ ಇಲ್ಲಿಯವರೆಗೆ ಒಟ್ಟು 31 ಘೋರ ಪ್ರಕರಣಗಳನ್ನು ದಾಖಲಿಸಿ 115.350 ಲೀ. ಗೋವಾ ಮದ್ಯ, 47.250 ಲೀ. ಡಿಫೆನ್ಸ್ ಮದ್ಯ, 140.940 ಲೀ. ಅಕ್ರಮ ಮದ್ಯ, 56.570 ಲೀ. ಬಿಯರ್, 244.920 ಲೀ. ವೈನ್, 115 ಲೀ. ಶೇಂದಿ, 92 ಲೀ. ಬೆಲ್ಲದ ಕೊಳೆ, 64.750 ಲೀ. ಕಳ್ಳಭಟ್ಟಿ ಒಟ್ಟು 876.780 ಲೀ. ಮದ್ಯ ಜಪ್ತುಪಡಿಸಿದ್ದು, 4 ವಾಹನ ಜಪ್ತುಪಡಿಸಿ ಒಟ್ಟು ರೂ. 9,31,638/- ಮೊತ್ತದ ಸೊತ್ತುಗಳನ್ನು ಜಪ್ತುಪಡಿಸಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವಂತಹ ಮದುವೆ, ಸಭೆ/ಸಮಾರಂಭಗಳಲ್ಲಿ ಮದ್ಯವನ್ನು ಸರಬರಾಜು ಮಾಡಲು ಇಲಾಖೆಯಿಂದ ಸಾಂದರ್ಭಿಕ ಸಿಎಲ್-5 ಸನ್ನದನ್ನು ನೀಡಲಾಗುತ್ತಿದ್ದು, ಈ ಹಿಂದೆ ಅಂತಹ ಸಭೆ/ಸಮಾರಂಭಗಳಲ್ಲಿ ಗೋವಾ ಮದ್ಯ/ಡಿಫೆನ್ಸ್ ಮದ್ಯದ ಬಳಕೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಿಎಲ್-5 ಸನ್ನದುಗಳನ್ನು ಅಬಕಾರಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಕೂಲಂಕುಷವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗಿರುತ್ತದೆ.
ಮದುವೆ/ ಔತಣಕೂಟ/ ಸಾರ್ವಜನಿಕ ಸಭೆ ಸಮಾರಂಭಗಳು ಹಾಲ್ ಹಾಗೂ ಇನ್ನಿತರ ಸಾರ್ವಜನಿಕ/ಖಾಸಗಿ ಸ್ಥಳಗಳಲ್ಲಿ ನಡೆಯುತ್ತಿದ್ದು ಸದ್ರಿ ಸಮಾರಂಭಗಳಲ್ಲಿ ಬಂದಂತಹ ಅತಿಥಿಗಳಿಗೆ ಊಟದ ವ್ಯವಸ್ಥೆಯೊಂದಿಗೆ ಮದ್ಯ ಸೇವನೆ ಮಾಡಲು ಮದ್ಯ/ಬಿಯರ್ಗಳನ್ನು ಸರಬರಾಜು ಮಾಡಲು ಇಚ್ಚಿಸಿದ್ದಲ್ಲಿ ಕರ್ನಾಟಕ ಅಬಕಾರಿ (ಸ್ವದೇಶಿ ಹಾಗೂ ವಿದೇಶಿ ಮದ್ಯ ಮಾರಾಟ) ನಿಯಮಗಳು 1968ರ ನಿಯಮ 3(5)ರಂತೆ ಸಾಂದರ್ಭಿಕ ಸನ್ನದನ್ನು ಪಡೆಯುವ ಬಗ್ಗೆ ಹಾಗೂ ಸದರಿ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಹೊರ ರಾಜ್ಯದ, ಸಶಸ್ತ್ರ ಪಡೆಗಳಿಗೆ ಮಾತ್ರ ಎಂದು ಮೀಸಲಿರಿಸಿರುವ, ಹಾಗೂ ಹೊರ ದೇಶದ ಮದ್ಯ/ವೈನ್/ಬೀನ್ರ್ನು ಸದ್ರಿ ಕಾರ್ಯಕ್ರಮದಲ್ಲಿ ಬಳಸಿದ್ದಲ್ಲಿ ಕಾರ್ಯಕ್ರಮ ಆಯೋಜಕರ, ಕಾರ್ಯಕ್ರಮಕ್ಕೆ ಸನ್ನದು ಪಡೆದವರ ಹಾಗೂ ಸ್ಥಳದ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 14, 15 ರ ಉಲ್ಲಂಘನೆ ಹಾಗೂ 32(1) ಮತ್ತು 38(ಎ) ರೀತಿಯ ಶಿಕ್ಷಾರ್ಹವಾಗಿರುವ ಕಾರಣ ಪ್ರಕರಣವನ್ನು ದಾಖಲಿಸಲಾಗುತ್ತದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಪತ್ರಿಕಾ ಪ್ರಕಟಣೆ ಮುಖೇನಾ ಅರಿವು ಮೂಡಿಸಲಾಗಿರುತ್ತದೆ. ಇಂತಹ ಸಮಾರಂಭಗಳಲ್ಲಿ ಅಕ್ರಮ ಮದ್ಯ/ಬಿಯರ್ಗಳನ್ನು ಸರಬರಾಜು ಮಾಡುವುದನ್ನು ತಡೆಗಟ್ಟುವ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳನ್ನು ವಿವಿಧ ಬ್ಯಾಚ್ಚ್ಗಳನ್ನಾಗಿ ವಿಂಗಡಿಸಿ, ಸದರಿ ಅಧಿಕಾರಿ/ ಸಿಬ್ಬಂದಿಗಳು ಮದುವೆ/ ಔತಣಕೂಟ/ ಸಾರ್ವಜನಿಕ ಸಭೆ ಸಮಾರಂಭಗಳು ಹಾಲ್ ಹಾಗೂ ಇನ್ನಿತರ ಸಾರ್ವಜನಿಕ/ಖಾಸಗಿ ಸ್ಥಳಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಸಮವಸ್ತ್ರ ಧರಿಸದೇ ಭೇಟಿ ನೀಡಿ, ಗೌರವದಿಂದ ಸಮಾರಂಭಕ್ಕೆ ಹಾಜರಾದ ಜನರಿಗೆ ಯಾವುದೇ ತೊಂದರೆ ಕೊಡದೆ, ಸಮಾರಂಭಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದ ಅನಧಿಕೃತ ಗೋವಾ ಮದ್ಯ ಹಾಗೂ ಡಿಫೆನ್ಸ್ ಮದ್ಯ ಸರಬರಾಜನ್ನು ತಡೆಹಿಡಿಯಲಾಗಿದ್ದು, ಭಾ.ತ.ಮ. ಮದ್ಯ ಮತ್ತು ಬೀಯರ್ ಬಳಕೆ ಹೆಚ್ಚಾಗಿ ರಾಜಸ್ವದ ಸಂಗ್ರಹಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಾಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023-24ನೇ ಸಾಲಿನ ಎಪ್ರಿಲ್ ನಿಂದ ದಿನಾಂಕ:15-01-2024 ವರೆಗೆ ಒಟ್ಟು 432 ಸಾಂದರ್ಭಿಕ ಸನ್ನದುಗಳನ್ನು ನೀಡಲಾಗಿದ್ದು, 2024-25ನೇ ಸಾಲಿನ ಎಪ್ರಿಲ್-2024 ರಿಂದ ದಿನಾಂಕ:15-01-2025 ವರೆಗೆ ಒಟ್ಟು 865 ಸಾಂದರ್ಭಿಕ ಸನ್ನದುಗಳನ್ನು ನೀಡಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದಾಗ ಒಟ್ಟು 433 ಸಾಂದರ್ಭಿಕ ಸನ್ನದುಗಳನ್ನು ಹೆಚ್ಚಿಗೆ ನೀಡಲಾಗಿರುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸನ್ನದು ಶುಲ್ಕದ ಮೂಲಕ ಆದಾಯ ಸಂಗ್ರಹಣೆಯಲ್ಲಿ ಹೆಚ್ಚಳವಾಗಿರುತ್ತದೆ.
ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಕೈಗೊಳ್ಳುವ ಜಾರಿ ಮತ್ತು ತನಿಖಾ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ನೀಡಲು ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.