25.9 C
Karnataka
Wednesday, January 22, 2025

ಮಾತಾ ಅಮೃತಾನಂದಮಯಿ ಮಠ: ಮಕ್ಕಳಿಗಾಗಿ ಬೃಹತ್ ಉಚಿತ ಆರೋಗ್ಯ ಮೇಳ

ಮ೦ಗಳೂರು: ಅಮೃತಾ ಆಸ್ಪತ್ರೆ ,ಕೊಚ್ಚಿ ಇವರಿಂದ ಮಂಗಳೂರಿನಲ್ಲಿ ಜನ್ಮಜಾತ ಹೃದಯರೋಗ ಸಮಸ್ಯೆ ಇರುವ ಮಕ್ಕಳಿಗಾಗಿ ಪ್ರಪ್ರಥಮ ಚಿಕಿತ್ಸಾ ಶಿಬಿರ ಜರುಗಿತು.
ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಕರಾವಳಿ ಕರ್ನಾಟಕದ ಅಮ್ಮನವರ ಭಕ್ತರು ಮತ್ತು ಸೇವಾಸಮಿತಿಗಳ ಸಹಯೋಗದೊಂದಿಗೆ ಜರುಗಿದ ಈ ಬೃಹತ್ ಆರೋಗ್ಯ ಮೇಳದಲ್ಲಿ ಕರ್ನಾಟಕದಾದ್ಯಂತ ಹಾಗೂ ಹೊರರಾಜ್ಯಗಳ ಜನರು ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಬಂದು ಭಾಗವಹಿಸಿ ಪ್ರಯೋಜನ ಪಡೆದರು.
18 ವರ್ಷದೊಳಗಿನ ಮಕ್ಕಳ ತಪಾಸಣೆಯನ್ನು ಕೊಚ್ಚಿಯ ಅಮೃತಾ ಆಸ್ಪತ್ರೆಯ ಪೀಡಿಯಾಟ್ರಿಕ್ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಆಗಿರುವ ಡಾ. ಬ್ರಿಜೇಶ್ ಪಿ ಕೆ ನೇತೃತ್ವದ ಮಕ್ಕಳ ಹೃದಯ ರೋಗ ತಂಡವು ವೈದ್ಯಕೀಯ ಶಿಬಿರವನ್ನು ಮುನ್ನಡೆಸಿತು.


ಜನ್ಮಜಾತ ಹೃದ್ರೋಗವಿದ್ದು ಶಸ್ತ್ರ ಚಿಕಿತ್ಸೆ ಅಗತ್ಯವುಳ್ಳ ಮತ್ತು ಇತರ ಗಂಭೀರ ಪರಿಸ್ಥಿತಿ ಗಳೊಂದಿಗೆ ಗುರುತಿಸಲ್ಲಟ್ಟ ಮಕ್ಕಳಿಗೆ ಕೊಚ್ಚಿಯ ಅಮೃತಾ ಆಸ್ಪತ್ರೆ ಯಲ್ಲಿ ಉಚಿತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳನ್ನು ನೀಡುವ ಭರವಸೆ ನೀಡಲಾಯಿತು.400 ಕ್ಕೂ ಅಧಿಕ ಮಕ್ಕಳು ಈ ಶಿಬಿರದ ಪ್ರಯೋಜನ ಪಡೆಯುತ್ತಿರುವುದರಿಂದ ಶಿಬಿರವು ವಿಶೇಷ ಮಹತ್ವ ಪಡೆದಿದೆ.
ಕರಾವಳಿ ಕರ್ನಾಟಕದ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಜ್ಯೋತಿ ಬೆಳಗಿಸುವ ಮೂಲಕ ಶಿಬಿರಕ್ಕೆ ಅಧಿಕೃತ ಚಾಲನೆ ನೀಡಲಾಯಿತು.ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ,ಮೇಯರ್ ಮನೋಜ್ ಕುಮಾರ್ ಗೌರವಾಧ್ಯಕ್ಷರುಗಳಾದ ಪ್ರಸಾದ್ ರಾಜ್ ಕಾಂಚನ್, ಡಾ.ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು.
ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ಸ್ವಾಗತಿಸಿದರು. ವೈದ್ಯಕೀಯ ವಿಭಾಗದ ಸಂಚಾಲಕ ಡಾ.ದೇವಿಪ್ರಸಾದ್ ಸದಾನಂದ ಹೆಜಮಾಡಿ ವಂದಿಸಿದರು.ಡಾ.ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು.
ವೈದ್ಯಕೀಯ ತಂಡದಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಬ್ರಿಜೇಶ್ ಜೊತೆಗೆ ಮಕ್ಕಳ ಹೃದಯ ರೋಗ ತಜ್ಞರಾದ ಡಾ. ಶೈನಿ, ಡಾ.ನಿಶಾಂತ್, ವೈದ್ಯಕೀಯ ಸೇವಾ ಕಾರ್ಯಕರ್ತ ವಿಷ್ಣು, ಡಾ.ಅಮೃತ ಸುಧಾಮಣಿ, ಮಂಗಳೂರಿನ ಅಮೃತಾ ಉಚಿತ ವೈದ್ಯಕೀಯ ತಂಡದ ತಜ್ಞ ವೈದ್ಯರುಗಳಾದ ಡಾ.ಸುಚಿತ್ರಾ ರಾವ್, ಡಾ.ಇಂದುಮತಿ ಮಲ್ಯ, ಡಾ.ರಿಷಿಕೇಶ್, ಫಾರ್ಮಸಿ ವಿಭಾಗದಲ್ಲಿ ನಿರಂಜನ್ ಅಡ್ಯಂತಾಯ ,ರಶ್ಮಿತಾ ಮೊದಲಾದವರು ಸೇವೆಗೈದರು.
ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದವರಿಗೆ ಕರ್ನಾಟಕ ಸರಕಾರಿ ರಸ್ತೆ ಸಾರಿಗೆ ಸಂಸ್ಥೆಹಾಗೂ ಅಮೃತ ವಿದ್ಯಾಲಯಂ ವತಿಯಿಂದ ಬಿಜೈ ಸರಕಾರಿ ಬಸ್ಸು ನಿಲ್ದಾಣ , ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣಗಳಿಂದ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಯಿತು.ಮಕ್ಕಳು ಹಾಗೂ ಪೋಷಕರು ,ಸೇವಾರ್ಥಿಗಳೆಲ್ಲರಿಗೂ ಬೆಳಗ್ಗೆ ಉಪಹಾರ, ಮಧ್ಯಾಹ್ನ ಭೋಜನ,ಸಂಜೆ ಉಪಹಾರ ಹಾಗೂ ರಾತ್ರಿಯ ಭೋಜನದ ವ್ಯವಸ್ಥೆಗಳನ್ನು ಉಚಿತವಾಗಿ ಕಲ್ಪಿಸಲಾಯಿತು ಎಂದು ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles