ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜನವರಿ 22 ರಂದು ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ಸಂಶೋಧನ ಸಂಸ್ಥೆ ಅವರ ಸಹಯೋಗದೊಂದಿಗೆ ದ.ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ಇಕೋ ಕ್ಲಬ್ ವಿದ್ಯಾರ್ಥಿಗಳಿಗೆ ‘ಪ್ರಕೃತಿ ಶಿಬಿರʼ ವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ದ.ಕ. ಜಿಲ್ಲಾ ಶಾಲಾ ಶಿಕ್ಷಣ ಉಪನಿರ್ದೇಶಕ ಗೋವಿಂದ ಮಡಿವಾಳ ಮಾತನಾಡಿ, ಮಾನವ ಬದುಕುತ್ತಿರುವುದು ಪ್ರಕೃತಿಯ ಕೃಪೆಯಿಂದ ಹಾಗಾಗಿ ತನ್ನ ಉಳಿವಿಗಾಗಿ ಪ್ರಕೃತಿ ಸಂರಕ್ಷಣೆಯನ್ನು ಮಾಡಲೇಬೇಕಾಗಿದೆ. ಶಾಲಾ ಇಕೋ ಕ್ಲಬ್‍ಗಳು ಈ ನಿಟ್ಟಿನಲ್ಲಿ ಮಕ್ಕಳನ್ನು ಪ್ರೇರೇಪಿಸಿ ಚಟುವಟಿಕೆಗಳನ್ನು ನಡೆಸಿ ಇದರ ಪ್ರಾಮುಖ್ಯತೆಯನ್ನು ತಿಳಿಸುವ ಅಗತ್ಯವಿದೆ ಎಂದರು.
ಕೇಂದ್ರದ ನಿರ್ದೇಶಕ ಡಾ| ಕೆ. ವಿ. ರಾವ್, ಈಗಾಗಲೇ ಹಲವು ಅವಾಂತರಗಳನ್ನು ಎದುರಿಸುತ್ತಿರುವ ನಾವು ಭೂತಾಪಮಾನವನ್ನು ಇಳಿಸುವ, ಜೀವ ಸಂಕುಲವನ್ನು ರಕ್ಷಿಸುವ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳದಿದ್ದರೆ ನಮ್ಮ ನಾಶ ನಾವೇ ತಂದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ಜನಾಂಗಕ್ಕೆ ಪರಿಸ್ಥಿತಿಯ ಗಂಭೀರತೆಯನ್ನು ಮನಗಾಣಿಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ ಎಂದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ವಲಯ ಅರಣ್ಯ ಅಧಿಕಾರಿ ಶ್ರೀ ರಾಜೇಶ್ ಬಳಿಗಾರ್, ಮನೋಜ್ ಮತ್ತು ತೇಜಸ್ವಿನಿ, ಗಿಡ ಮರಗಳು, ವನ್ಯ ಮೃಗಗಳ ಹಾಗೂ ಸಮುದ್ರ ಜೀವಿಗಳ ಕುರಿತು ವಿವರಗಳನ್ನು ನೀಡಿದರು.
ಇಕೋ ಕ್ಲಬ್ ಚಟುವಟಿಕೆಗಳ ಕುರಿತು ಲಲಿತಾ ಬಿ. ರಾವ್ ಇವರು ಉದಾಹರಣೆಗಳ ಮೂಲಕ ಮಾಹಿತಿ ನೀಡಿ ಶಾಲೆಗಳಲ್ಲಿ ಇವುಗಳನ್ನು ಕೈಗೊಳ್ಳಲು ಸಾಧ್ಯ ಎಂದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವೈಜ್ಞಾನಿಕಾಧಿಕಾರಿ ರಾಮಕೃಷ್ಣ ಮರಾಟಿ, ಪರಿಸರಕ್ಕೆ ಸಂಬಂಧಿ ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ವಿಜ್ಞಾನಿ ಡಾ. ಹೆಚ್ ಎಸ್ ಶೆಣೈ , ಮೇಲ್ವಿಚಾರಕ ಉದಯ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಪಿಲಿಕುಳದ ಸಸ್ಯ ಕಾಶಿಯಲ್ಲಿ ಪ್ರಕೃತಿನಡಿಗೆ ಜೊತೆಗೆ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.
ಇಒPಖI ಯ ಪ್ರತಿನಿಧಿಗಳು ಉಪಸ್ಥಿತರಿದ್ದರು.ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಾರ್ಯಾಗಾರದ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಪ್ರಶಂಸೆ ವ್ಯಕ್ತಪಡಿಸಿದರು.
ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿ, ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ಸ್ವಾಗತಿಸಿ, ಮೆಂಟರ್ ಅಂಬಿಕಾ ವಂದಿಸಿದರು.