37 C
Karnataka
Tuesday, April 22, 2025

ಪ್ಲಾಸ್ಟಿಕ್ ಪಾರ್ಕ್ : ಕೆಐಎಡಿಬಿಗೆ ಸಂಸದ ಕ್ಯಾ.ಚೌಟ ಸೂಚನೆ

ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಯೋಜನೆಗೆ ಭೂಸ್ವಾಧೀನ ತಕರಾರಿನಿಂದಾಗಿ ಹಿನ್ನಡೆಯಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದಿದ್ದು, ಭೂವಿವಾದಿತ 9.33 ಎಕರೆ ಜಾಗ ಕೈಬಿಟ್ಟು ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಶೀಘ್ರ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಗಂಜಿಮಠದಲ್ಲಿ104 ಎಕರೆಯಲ್ಲಿ ಕರಾವಳಿಯ ಮಹಾತ್ವಾಕಾಂಕ್ಷೆಯ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಯೋಜನೆಗೆ ಕೇಂದ್ರ ಸಚಿವ ದಿ. ಅನಂತ ಕುಮಾರ್ ರಾಸಾಯನಿಕ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. 2022ರಲ್ಲಿ ಯೋಜನೆ ಜಾರಿಗೆ ಅನುಮೋದನೆ ದೊರೆತಿದ್ದರೂ 9.33 ಎಕರೆ ಭೂಸ್ವಾಧೀನ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಸಾಕಷ್ಟು ವಿಳಂಬವಾಗಿದೆ. ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ನಡೆಯದಿರುವುದು ಕಂಡುಬಂದಿದೆ ಎಂದು ಕ್ಯಾ. ಚೌಟ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲಿ 9.33 ಎಕರೆ ಭೂಸ್ವಾಧೀನ ವಿವಾದದಿಂದಾಗಿ ಯೋಜನೆ ಕಾರ್ಯರೂಪಕ್ಕೆ ತರಲು ಹಿನ್ನಡೆಯಾಗಿರುವುದಾಗಿ ಕೆಐಎಡಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಿರುವಾಗ, ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ತಯಾರಿಸಿ ಉಳಿದ ಜಾಗ ಅಭಿವೃದ್ಧಿಸಬೇಕು. ಆ ಮೂಲಕ ಯೋಜನೆ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಕ್ಯಾ. ಚೌಟ ಕೋರಿದ್ದಾರೆ.

ಆರಂಭದಲ್ಲಿ ಹಲವು ಪ್ಲಾಸ್ಟಿಕ್‌ ಕಂಪೆನಿಗಳು ಉದ್ದೇಶಿತ ಪ್ಲಾಸ್ಟಿಕ್‌ ಪಾರ್ಕ್‌ನಲ್ಲಿ ಘಟಕ ಸ್ಥಾಪಿಸುವುದಕ್ಕೆ ಮುಂದಾಗಿದ್ದವು. ಆದರೆ, ಪಾರ್ಕ್‌ ನಿರ್ಮಾಣ ಕಾರ್ಯ ವಿಳಂಬವಾದ ಕಾರಣ ಉದ್ಯಮಿಗಳು ಬೇರೆಡೆ ಆಸಕ್ತಿ ತೋರಿಸಿದ್ದಾರೆ. ಇದು ಸಹಜವಾಗಿಯೇ ನಮ್ಮ ಕರಾವಳಿಯ ಇತರೆ ಯೋಜನೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ, ಆದಷ್ಟು ಬೇಗ ಈ ಯೋಜನೆಗೆ ಎದುರಾಗಿರುವ ಅಡ್ಡಿ ದೂರ ಮಾಡಿ ಮಂಗಳೂರಿನ ಪ್ಲಾಸ್ಟಿಕ್‌ ಪಾರ್ಕ್‌ನಲ್ಲಿ ಬಂಡವಾಳ ಹೂಡುವುದಕ್ಕೆ ಉದ್ದಿಮೆದಾರರನ್ನು ಆಕರ್ಷಿಸಲು ತಾವು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಮುಖ್ಯ ಎಂಜಿನಿಯರ್‌ಗೆ ಬರೆದಿರುವ ಪತ್ರದಲ್ಲಿ ಕ್ಯಾ. ಚೌಟ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles