ಮಂಗಳೂರು: ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿ ಮಾಡಲು ಕೊನೆಯ ಅವಕಾಶವಾಗಿರುತ್ತದೆ.
ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುವುದು.ಕೆಲವು ಸದಸ್ಯರು OTP ಮೂಲಕ ತಿದ್ದುಪಡಿ ಮಾಡಿದ್ದು, ಸದಸ್ಯರು ಜೀವಂತ ಇರುವ ಬಗ್ಗೆ ಜೀವಮಾಪನ ನೀಡಿ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ನೀಡಬೇಕಾಗಿದ್ದು, ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್.ಪಿ.ಜಿ.ವಿವರ, ಮೊಬೈಲ್ ಸಂಖ್ಯೆ ತುರ್ತಾಗಿ ಸಂಗ್ರಹಿಸಬೇಕು. ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್.ಪಿ.ಜಿ ದಾಖಲೆ, ಜಾತಿ ಪ್ರಮಾಣ ಪತ್ರ(ಇದ್ದಲ್ಲಿ), ಆದಾಯ ಪ್ರಮಾಣ ಪತ್ರ,ಎಂಡೋಸಲ್ಫಾನ್ ಪೀಡಿತರಂತಹ ವಿಶೇಷ ವರ್ಗದವರು ಹೊಂದಿರುವ ಧೃಢಪತ್ರಗಳಿದ್ದಲ್ಲಿ ಅವುಗಳೊಂದಿಗೆ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಲು ತಿಳಿಸಿದೆ.
ಆದ್ಯತೆ ಮೇರೆಗೆ ಇ-ಕೆವೈಸಿ ಮಾಡದಿರುವ ಅಂತ್ಯೋದಯ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದು ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ. ಇದನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಮಾಡಲು ಕ್ರಮ ವಹಿಸಲಾಗಿರುತ್ತದೆ. ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಸಹಕರಿಸಲು ಕೋರಿದೆ, ಇ-ಕೆವೈಸಿ ಸಂಗ್ರಹಣೆಯನ್ನು ಕರ್ನಾಟಕ ವನ್ & ಗ್ರಾಮ ವನ್ ಗಳಲ್ಲಿ ಕೂಡಾ ಮಾಡಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರು ಮತ್ತು ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ ಇವರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
