ಮಂಗಳೂರು: ಕ್ರೀಡೆ, ಮನೋರಂಜನೆ ಮತ್ತು ತುಳುನಾಡಿನ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಮೂರನೇ ಆವೃತ್ತಿಯ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಹಾಗೂ ತಪಸ್ಯಾ ಫೌಂಡೇಶನ್ ಸಾರಥ್ಯದಲ್ಲಿ ನಡೆಯಲಿರುವ ಮೂರು ದಿನಗಳ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಟ್ರಯಾಥ್ಲನ್ ಶುಕ್ರವಾರ ಸಂಜೆ ತಣ್ಣೀರುಬಾವಿ ಬೀಚ್ ನಲ್ಲಿ ಶುಭಾರಂಭಗೊಂಡಿತು.
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹಿಂಗಾರದ ಸಿರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮನುಷ್ಯನ ಬದುಕಿಗೆ ಗುರು ಮತ್ತು ಗುರಿಯಿರಬೇಕು ಇಲ್ಲದಿದ್ದರೆ ಯಾವ ಕೆಲಸ ಕೂಡಾ ಸಾಕಾರಗೊಳ್ಳುವುದಿಲ್ಲ. ತಪಸ್ಯಾ ಫೌಂಡೇಶನ್ ಇಂತಹ ಶ್ರೇಷ್ಠ ಕೆಲಸವನ್ನು ಸೇವೆಯ ಮೂಲಕ ಮಾಡುತ್ತಿದೆ ಎ೦ದರು .
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತಾಡಿ, ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ತಪಸ್ಯಾ ಫೌಂಡೇಶನ್ ಹಮ್ಮಿಕೊಂಡಿರುವ ಬೀಚ್ ಫೆಸ್ಟಿವಲ್ ಯಶಸ್ವಿಯಾಗಿ ನಡೆಯಲಿ. ಮಂಗಳೂರಿನ ಜನತೆಗೆ ಇಂತಹ ಉತ್ಸವಗಳು ಹೆಚ್ಚಿನ ಶಕ್ತಿಯನ್ನು ನೀಡಲಿ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ“ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕುಸ್ತಿ ಫೆಡರೇಷನ್ ಚೇರ್ ಮೆನ್ ಗುಣರಂಜನ್ ಶೆಟ್ಟಿ, ಗುರುನಾಥೇ ಗೌಡ, ಡಾ.ಚಂದ್ರೇ ಗೌಡ, ಪದ್ಮಶ್ರೀ ಡಾ.ಉದಯ್ ದೇಶಪಾಂಡೆ, ಡಾ.ಕರುಣಾ ಸಾಗರ್, ಇಂದ್ರಾಣಿ ಕರುಣಾ ಸಾಗರ್, ಐಡಿಎಫ್ ಸಿ ಬ್ಯಾಂಕ್ ನ ಹರ್ಷ ಗೌಡ, ಬಿ.ಎನ್.ಶೆಟ್ಟಿ, ತಪಸ್ಯಾ ಫೌಂಡೇಶನ್ ಸಂಸ್ಥಾಪಕಿ ಸಬಿತಾ ಆರ್. ಶೆಟ್ಟಿ, ನವೀನ್ ಹೆಗ್ಡೆ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪಿ.ಎಲ್. ಧರ್ಮ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಎನ್.ಬಿ.ಶೆಟ್ಟಿ ಸ್ವಾಗತಿಸಿದರು.