ಮಂಗಳೂರು ಫೆ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ, ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರ / ಕುಂಬಾರರ ಯುವ ವೇದಿಕೆ ಇವರ ಸಹಕಾರದೊಂದಿಗೆ ಸಂತ ಕವಿ ಸರ್ವಜ್ಞ ಜಯಂತಿ ಗುರುವಾರ ಬೋಂದೆಲ್ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ, 16ನೇ ಶತಮಾನದಲ್ಲಿ ಕುಲಾಲ ಸಮುದಾಯದಲ್ಲಿ ಹುಟ್ಟಿದ ಸಂತ ಕವಿ ಸರ್ವಜ್ಞ ಜೀವನವನ್ನು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದರು ಎಂಬುದನ್ನು ನಾವು ಅವರ ತ್ರಿಪದಿಗಳನ್ನು ಓದಿದಾಗ ತಿಳಿಯುತ್ತದೆ. ಮೂರು ಪುಟಗಳವರೆಗೆ ಬರೆಯುವ ವಿಚಾರವನ್ನು ಕೇವಲ ಮೂರೇ ಸಾಲುಗಳಲ್ಲಿ ತಿಳಿಸುವ ಸರ್ವಜ್ಞನ ತ್ರಿಪದಿಗಳನ್ನು ವಿದ್ಯಾರ್ಥಿಗಳು ಓದಿ ಅರಿತುಕೊಳ್ಳಬೇಕು. ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ ಎ೦ದು ಹೇಳಿದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ, ಸರ್ವ ಜ್ಞಾನವನ್ನು ಹೊಂದಿದ ತ್ರಿಪದಿ ಕವಿ ಸರ್ವಜ್ಞ ಜನರ ಜೀವನಕ್ಕೆ, ಸಮಾಜಕ್ಕೆ ಉತ್ತಮ ಸಂದೇಶವನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ ಮಾತನಾಡಿ, ಇಂತಹ ಜಯಂತಿಗಳನ್ನು ಆಚರಿಸುವುದರಿಂದ ಇಂದಿನ ಯುವ ಜನತೆಗೆ ಅಂದಿನ ಹಿರಿಯರ ಜೀವನ ಚರಿತ್ರೆ ತಿಳಿಯುತ್ತದೆ ಎ೦ದರು.
ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಯತೀಶ್ ಕುಮಾರ್ ಮಾತನಾಡಿ, 16ನೇ ಶತಮಾನದ ಸರ್ವಜ್ಞರ ನಿಜನಾಮ ಪುಷ್ಪದತ್ತ. ಜೀವನ ಅನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೊಂದಿಲ್ಲ ಎಂಬುದನ್ನು ವಚನದ ಮೂಲಕ ಸರ್ವಜ್ಞ ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೋಂದೆಲ್ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ಗುಣವಂತ ವಿ ಗುನಗಿ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಕಾರ್ಯಾಧ್ಯಕ್ಷ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಗಂಗಾಧರ ಬಂಜನ್, ಗಣೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ಹೆಚ್. ಕೆ ನಯನಾಡು ನಿರೂಪಿಸಿದರು.
Saint poet sarvajna Jayanti
