ಮ೦ಗಳೂರು: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಮಂಗಳೂರು ಪೊಲೀಸರು ಬೇಧಿಸಿದ್ದು ಸುಮಾರು 75 ಕೋಟಿ ರೂ ಮೌಲ್ಯದ 37.87 ಕಿಲೋ ಎಂಡಿಎಂಎ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಬಂಬಾ ಫಂಟಾ (31) ಮತ್ತು ಅಬಿಗೈಲ್ ಅಡೊನಿಸ್ (30) ಎಂಬವರನ್ನು ಬೆಂಗಳೂರಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಂಪ್ ವೆಲ್ ಬಳಿ ಡ್ರಗ್ ಮಾರಾಟ ಮಾಡುತ್ತಿದ್ದ ಹೈದರ್ ಅಲಿಯನ್ನು 2024 ರಲ್ಲಿ ಬಂಧಿಸಲಾಗಿತ್ತು. ಬಳಿಕ ಈತನಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್ ನೈಜಿರಿಯಾದ ಪ್ರಜೆ ಪೀಟರ್ ಇಕೆಡಿ ಬೆಲೊನ್ವೊ ಎಂಬಾತನ್ನು ಬೆಂಗಳೂರಿನಲ್ಲಿ ಬಂಧಿಸಿ ಈತನಿಂದ 6.248 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈತನ ಹಿನ್ನೆಲೆಯನ್ನು ಬೆನ್ನತ್ತಿ ಹೋದ ಮಂಗಳೂರು ಸಿಸಿಬಿ ಪೊಲೀಸರು ಸುಮಾರು ಆರು ತಿಂಗಳ ಕಾಲ ನಿರಂತರ ತನಿಖೆ ಕಾಯಾ೯ಚರಣೆ ನಡೆಸಿ ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ದೆಹಲಿಯಿಂದ ಬೆಂಗಳೂರಿಗೆ ಮತ್ತು ದೇಶದ ಇತರ ಸ್ಥಳಗಳಿಗೆ ವಿಮಾನ ಮಾರ್ಗದ ಮೂಲಕ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಮಾಹಿತಿ ಲಭಿಸಿತ್ತು.ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾರ್ಚ್ 14ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ಈ ಇಬ್ಬರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಬ೦ಧಿಸಿ ಅವರ ಬಳಿಯಿದ್ದ ಎರಡು ಟ್ರಾಲಿ ಬ್ಯಾಗ್ ಗಳಲ್ಲಿ ಸಾಗಾಟ ಮಾಡಿದ್ದ 75 ಕೋಟಿ ರೂ ಮೌಲ್ಯದ 37.585 ಕೆಜಿ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಕ೦ಡಿದ್ದಾರೆ.
ಇದು ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆಯಾಗಿದ್ದು, ಸಿಸಿಬಿ ಪೊಲೀಸರ ಕಾರ್ಯಾಚರಣೆಯ ಬಗ್ಗೆ ನಗರ ಪೊಲೀಸ್ ಅಯುಕ್ತ ಅನುಪಮ್ ಅಗರ್ವಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
