ಕಾಟಿಪಳ್ಳ : ಶ್ರೀಕ್ಷೇತ್ರ ಗಣೇಶಪುರದಲ್ಲಿ ಬ್ರಹ್ಮಕಲಶೋತ್ಸವ, ಬ್ರಹ್ಮರಥ ಸಮರ್ಪಣೆ, ನಾಗಮಂಡಲ, ಜಾರಂದಾಯ ನೇಮೋತ್ಸವ, ಭಜನಾ ಸಂಭ್ರಮೋತ್ಸವ ಕಾರ್ಯಕ್ರಮವು ಎಪ್ರಿಲ್ 18 ರಿಂದ 26ರವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥ ಸಮರ್ಪಣೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಹೇಳಿದ್ದಾರೆ.
ಅವರು ದೇವಳದಲ್ಲಿ ನಡೆದ ಕಾರ್ಯಕ್ರಮದ ಮಾಹಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥವು ಮೂಡುಬಿದ್ರೆ ನಾರಾಯಣ ಆಚಾರ್ಯರ ಪುತ್ರ ಹರೀಶ್ ಆಚಾರ್ಯರ ನೇತೃತ್ವದಲ್ಲಿ ಸಂಪಿಗೆಯಲ್ಲಿ ಬ್ರಹ್ಮರಥದ ನಿರ್ಮಾಣವಾಗುತ್ತಿದ್ದು ಅದು ಎಪ್ರಿಲ್ 12 ರಂದು ಭವ್ಯ ಮೆರವಣಿಗೆಯ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಲಿದೆ.
1960ರ ದಶಕದಲ್ಲಿ ತುಳುನಾಡಿನ ಪಾರಂಪರಿಕ ಪಟ್ಟಣವಾಗಿದ್ದ ಪಣಂಬೂರು ನವಮಂಗಳೂರು ಬಂದರ್ ಆಗಿ ಪರಿವರ್ತನೆ ಗೊಂಡಾಗ ಅಲ್ಲಿನ ನಿವಾಸಿಗಳು ಕಾಟಿಪಳ್ಳಕ್ಕೆ ಬಂದು ನೆಲೆಸಿದರು. 1988ನೇ ಇಸವಿಯಲ್ಲಿ ಪುನರ್ನಿರ್ವಸಿತ ಕಾಟಿಪಳ್ಳ ಕೈಕಂಬ ಪ್ರದೇಶದಲ್ಲಿ ಸರಕಾರದಿಂದ ಮಂಜೂರಾದ ಜಮೀನಿನಲ್ಲಿ ಕಾಟಿಪಳ್ಳ, ಕೃಷ್ಣಾಪುರ, ಬಾಳ, ಕುತ್ತೆತ್ತೂರು, ಕಾನ, ಕಟ್ಲ, ಸೂರಿಂಜೆ, ಮಧ್ಯ ಇತ್ಯಾದಿ ಪರಿಸರದ ಗ್ರಾಮಸ್ಥರು ಸೇರಿಕೊಂಡು
ಶ್ರೀ ಮಹಾಗಣಪತಿ ದೇವಸ್ಥಾನವನ್ನು ನಿರ್ಮಿಸಿದರು. ಬಲಮುರಿ ಶ್ರೀ ಮಹಾಗಣಪತಿ ದೇವರು ನೆಲೆಯಾದ ಪುಣ್ಯ ಪ್ರದೇಶಕ್ಕೆ ಯತಿಶ್ರೇಷ್ಠರಾದ ಪೇಜಾವರ ವಿಶ್ವೇಶ್ವತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಗಣೇಶಪುರ ಎಂಬ ನಾಮಕರಣವನ್ನು ಮಾಡಿದರು. ಕೇವಲ ಮೂರು ದಶಕಗಳ ಅವಧಿಯಲ್ಲಿ ಶ್ರೀಕ್ಷೇತ್ರ ಗಣೇಶಪುರವು ದೇಶದ ಇತಿಹಾಸದಲ್ಲೇ ಪ್ರಥಮ ಎಂಬಂತೆ ಹಿಂದೂ ಧಾಮಿಕ ದತ್ತಿ ಇಲಾಖೆಯ ಏ ಗ್ರೇಡ್ ದೇವಳವನ್ನಾಗಿ ಪರಿವರ್ತಿಸುವ ಕಾರಣಿಕವನ್ನು ಶ್ರೀ ಮಹಾಗಣಪತಿ ದೇವರು ಪ್ರದರ್ಶಿಸಿದ್ದಾರೆ. ಭಕ್ತರ ಇಷ್ಠಾರ್ಥವನ್ನು ಪೂರೈಸುವ ಕ್ಷಿಪ್ರಪ್ರಸಾದ ಪ್ರಧಾನ ಮಾಡುವ ದೇವರಾಗಿ ಇಲ್ಲಿ ಮೆರೆಯುತ್ತಿದ್ದಾರೆ. ಎಂದು ಧರ್ಮೇಂದ್ರ ಗಣೇಶಪುರ ತಿಳಿಸಿದರು.
ಕ್ಷೇತ್ರದ ಅರ್ಚಕ ಸುನೀಲ್ ಭಟ್, ಕಾರ್ಯನಿರ್ವಹಣಾ ಧಿಕಾರಿ ನವೀನ್ ಕುಮಾರ್, ಬ್ರಹ್ಮಕಲಶೋತ್ಸವ, ನಾಗಮಂಡಲ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್, ಕಾರ್ಯಾಧ್ಯಕ್ಷ ಪ್ರಶಾಂತ್ ಮುಡಾಯಿಕೋಡಿ ಉಪಸ್ಥಿತರಿದ್ದರು.
ನಿರಂಜನ ಹೊಳ್ಳ ಸ್ವಾಗತಿಸಿದರುಪ್ರಶಾಂತ್ ಮುಡಾಯಿಕೋಡಿ ಧನ್ಯವಾದ ಸಮರ್ಪಿಸಿದರು
