ಮ೦ಗಳೂರು: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸುಳ್ಳು ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಯೆಯ್ಯಾಡಿಯಲ್ಲಿರುವ ಇಡಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರ, ಅಮಿತ್ ಶಾ, ಇಡಿ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಬಳಿಕ ಗೃಹ ಸಚಿವ ಅಮಿತ್ ಶಾ ಭಾವಚಿತ್ರವನ್ನು ಸುಟ್ಟು ಪ್ರತಿಭಟಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಕೇಂದ್ರದ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ದಬ್ಬಾಳಿಕೆ ನಡೆಸಲು ಹೊರಟಿದೆ, ಅದಕ್ಕೆ ಕಾಂಗ್ರೆಸ್ ದೇಶವ್ಯಾಪಿ ಹೋರಾಟ ಮಾಡುವ ಮೂಲಕ ತಕ್ಕ ಉತ್ತರ ಕೊಟ್ಟಿದ್ದೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿರುವುದು ಖಂಡನೀಯ. ಇದರ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಭರತ್ ಮುಂಡೋಡಿ, ಟಿ ಹೊನ್ನಯ್ಯ, ಬ್ಲಾಕ್ ಅಧ್ಯಕ್ಷರಾದ ಜೆ. ಅಬ್ದುಲ್ ಸಲೀಮ್, ಪ್ರಕಾಶ್ ಸಾಲಿಯಾನ್, ಪದ್ಮನಾಭ ಪೂಜಾರಿ ವಿಟ್ಲ, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರು ಮನೋಹರ್ ರಾಜೀವ್, ನಾರಾಯಣ್ ನಾಯಕ್, ಲಾರೆನ್ಸ್ ಡಿ ಸೋಜಾ, ಅಲಿಸ್ಟರ್ ಡಿ ಕುನ್ನಾ, ಪ್ರದೀಪ್ ರೈ ಪಾಂಬರ್ ಪುತ್ತೂರು, ಉಷಾ ಅಂಚನ್ ಕಡಬ, ವಿಜಯ ಕುಮಾರ್ ಸೊರಕೆ, ಕಿರಣ್ ಬುಡ್ಲೆಗುತ್ತು ಸುಳ್ಯ, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಎಂ ಪಿ ಮನುರಾಜ್, ನೀರಜ್‌ಪಾಲ್, ನಝೀರ್ ಬಜಾಲ್, ಪಿ ಎಸ್ ಗಂಗಾಧರ್ ಸುಳ್ಯ, ಗೀತಾ ಅತ್ತಾವರ, ಮಹೇಶ್ ರೈ ಕಾವು ಪುತ್ತೂರು, ಸುರೇಶ್ ನಾವೂರ್, ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ ಸುಳ್ಯ,ಚೇತನ್ ಕುಮಾರ್ ಅಶೋಕ್ ನಗರ, ರಾಹುಲ್ ಅದಪಾಂಗಯ ಸುಳ್ಯ, ಸೋಹಾನ್ ಎಸ್ ಕೆ, ಸಬೀರ್ ಎಸ್,. ಸಕುಂತಲಾ ಕಾಮತ್ ಮತ್ತಿತರರಿದ್ದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.
