ಮಂಗಳೂರು: ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ತತ್ ಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಸಂಸದರು, ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಘಟನೆಯಿಂದ ನಾನು ದಿಗ್ಭ್ರಮೆಗೊಂಡಿದ್ದು, ಭೀಕರ ಕೊಲೆ ಕೃತ್ಯದ ಕುರಿತು ತೀವ್ರ ಆತಂಕ ಮತ್ತು ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘಟನೆಯು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರತೆ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಅಟ್ಟಹಾಸಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸುಹಾಸ್ ಶೆಟ್ಟಿ ಹತ್ಯೆಯು ಕರಾವಳಿ ಮಾತ್ರವಲ್ಲ ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ಸುಳ್ಯದ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರು ನಡೆಸಿದ್ದರು. ಈ ಸಂಘಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗಾಗಲೇ ನಿಷೇಧಿಸಿದೆ. ಇಷ್ಟಾಗಿಯೂ ಈಗ ಪ್ರವೀಣ್ ಮಾದರಿಯಲ್ಲೇ ಮತ್ತೊಬ್ಬ ಹಿಂದೂ ಯುವಕನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ವಿಚಾರ. ಮಗನನ್ನು ಕಳೆದುಕೊಂಡಿರುವ ಸುಹಾಸ್ ಶೆಟ್ಟಿ ಅವರ ಕುಟುಂಬವು ದಿಗ್ಭ್ರಾಂತಗೊಂಡು ನ್ಯಾಯಕ್ಕಾಗಿ ಕಾಯುತ್ತಿದೆ. ಈ ಭಾಗದ ಚುನಾಯಿತ ಪ್ರತಿನಿಧಿಯಾಗಿ ಮತ್ತು ಇಲ್ಲಿನ ನೋವು ಹಾಗೂ ಹತಾಶೆಯನ್ನು ವೈಯಕ್ತಿಕವಾಗಿ ಕಂಡಿರುವ ವ್ಯಕ್ತಿಯಾಗಿ, ಈ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಈ ಕೂಡಲೇ ಎನ್ಐಎಗೆ ಹಸ್ತಾಂತರಿಸಬೇಕೆಂದು ಕ್ಯಾ. ಚೌಟ ಅವರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸುಹಾಸ್ ಶೆಟ್ಟಿ ಅವರ ಹತ್ಯೆ ವಿಚಾರವಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಮಧ್ಯಪ್ರವೇಶಿಸಿ, ಕೇವಲ ಅಪರಾಧಿಗಳು ಮಾತ್ರವಲ್ಲದೆ ಅವರಿಗೆ ಬೆಂಬಲ ನೀಡಿದ ಮತ್ತು ಹಣಕಾಸು ನೆರವು ನೀಡಿದ ಎಲ್ಲರನ್ನು ತ್ವರಿತವಾಗಿ ನ್ಯಾಯದ ಮುಂದೆ ತರಲು ಕ್ರಮ ಕೈಗೊಳ್ಳಬೇಕೆಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿನಂತಿಸಿದ್ದಾರೆ.
MP K. Chautala's letter to Minister Amit Shah
