22 C
Karnataka
Thursday, May 22, 2025

ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ:ಸರಕಾರಿ ಲೇಡಿಗೋಷನ್ ಆಸ್ಪತ್ರೆ ಸಾಧನೆ

ಮಂಗಳೂರು: 175 ವರ್ಷಗಳ ಸುಂದರ ಇತಿಹಾಸವನ್ನು ಹೊಂದಿ ಸಂಭ್ರಮಾಚರಣೆಯಲ್ಲಿರುವ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಅಪರೂಪದ ಹಾಗೂ ಮಾರಣಾಂತಿಕವಾದ ಖಾಯಿಲೆಯನ್ನು ಹೊಂದಿದ ಗರ್ಭಿಣಿ ಸ್ತ್ರೀ ಒಬ್ಬರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ,ತಾಯಿ ಮಗುವಿನ ಪ್ರಾಣ ಸಂರಕ್ಷಣೆಯನ್ನು ಮಾಡಿ ದಾಖಲೆ ನಿರ್ಮಿಸಿದೆ.
ಹುಟ್ಟಿನಿಂದ ರಕ್ತಸಂಬಂಧಿತ ಕಾಯಿಲೆಯಾದ ಹೀಮೋಫೀಲಿಯಾವನ್ನು ಬಳುವಳಿಯಾಗಿ ಪಡೆದುಕೊಂಡು ಬಂದ ಮಹಿಳೆಯೊಬ್ಬರು, ಬಾಲ್ಯದಿಂದಲೇ ಇದಕ್ಕೆ ಸಂಬಂಧಿತ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಿಂದ ಪಡೆದುಕೊಂಡು ಬರುತ್ತಿದ್ದರು. ಪ್ರಾಯ ಪ್ರಬುದ್ಧರಾಗಿ ವೈವಾಹಿಕ ಜೀವನವನ್ನು ಪ್ರಾರಂಭಿಸಿದ ನಂತರ ಸಹಜವಾಗಿ ಗರ್ಭವತಿಯಾದರು. ಆದರೆ ಗರ್ಭಾವಸ್ಥೆಯಲ್ಲಿ ಹೀಮೋಫೀಲಿಯಾ (ವಾನ್ ವಿಲ್ಲಿ ಬ್ರಾಂಡ್ಸ್ ಖಾಯಿಲೆ) ಇದ್ದಲ್ಲಿ ಯಾವುದೇ ಸಮಯದಲ್ಲಿ ರಕ್ತಸ್ರಾವ ಆಗಿ ತಾಯಿ ಮರಣ ಆಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ದೇಹದಿಂದ ರಕ್ತಸ್ರಾವವಾಗುವ ಸಂದರ್ಭದಲ್ಲಿ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಫ್ಯಾಕ್ಟರ್ 8 ರ ಕೊರತೆ ಈ ಖಾಯಿಲೆಯ ಬಹುಮುಖ್ಯ ಮೂಲ ಅಂಶ. ನಿರ್ಧಿಷ್ಟವಾದ ಈ ಫ್ಯಾಕ್ಟರನ್ನು ನಿರಂತರವಾಗಿ ಕೃತಕ ರೂಪದಲ್ಲಿ ಗರ್ಭಿಣಿಗೆ ಅಥವಾ ರೋಗಿಗೆ ನೀಡಬೇಕಾಗುತ್ತದೆ.
ದುರಾದೃಷ್ಟವಶಾತ್ ಒಂದು ಲಕ್ಷಕ್ಕೆ ಒಂದರಂತೆ ಇರುವ ಅಪರೂಪದ ಈ ಖಾಯಿಲೆಗೆ ಚಿಕಿತ್ಸೆ ಅಷ್ಟು ಸುಲಭ ಸಾಧ್ಯವಲ್ಲ. ಚಿಕಿತ್ಸೆ ಇದ್ದರೂ ಪ್ಲಾಸ್ಮಾದಿಂದ ಸಂಸ್ಕರಿಸಿ ಉತ್ಪಾದಿಸಲ್ಪಡುವ ಇಂಥ ಇಂಜೆಕ್ಷನ್ ರೂಪದ ಔಷಧಿಗಳು ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಇಂಥ ಪ್ರಕರಣಗಳಲ್ಲಿ ತಾಯಿ ಮರಣ ಸಾಧ್ಯತೆ ಅಧಿಕ. ಈ ಸಂದರ್ಭದಲ್ಲಿ ಮಹಿಳೆಗೆ ಆಪ್ತಸಮಾಲೋಚನೆ ಮಾಡಿ ಗಂಭೀರತೆಯನ್ನು ತಿಳಿಹೇಳಲಾಯಿತಾದರೂ, ವಿವಿಧ ಕೌಟುಂಬಿಕ ಕಾರಣಗಳಿಗಾಗಿ ಸಂದಿಗ್ಧತೆಯಲ್ಲಿ ಸಿಲುಕಿದ ಮಹಿಳೆ ತನ್ನ ಬಲಿದಾನವಾದರೂ ಸರಿ ತಾನು ಒಂದು ಮಗುವಿನ ತಾಯಿಯಾಗಲೇ ಬೇಕು ಎನ್ನುವ ತೀರ್ಮಾನಕ್ಕೆ ಬದ್ಧತೆ ತೋರಿದರು.
ಇಂಥಹ ಅಸಹಾಯಕ ಪರಿಸ್ಥಿತಿಯಲ್ಲಿ ವೆನ್ಲಾಕ್ ಬ್ಲಡ್ ಬ್ಯಾಂಕ್‍ನ ಡಾ.ಶರತ್ ಅವರನ್ನು ಭೇಟಿಯಾದ ಸಂಬಂಧಿಕರು, ಫ್ಯಾಕ್ಟರ್ 8 ಇಂಜೆಕ್ಷನ್‍ಗಳ ಪೂರೈಕೆಯ ಬಗ್ಗೆ ಕೇಳಿಕೊಳ್ಳುತ್ತಾರೆ. ಆದರೆ ಗರ್ಭಾವಸ್ಥೆಯ ಜೊತೆಯಲ್ಲಿ ಕ್ಲಿಷ್ಟಕರವಾದ ಪರಿಸ್ಥಿತಿ ಒಡಗೂಡಿರುವುದರಿಂದ, ತಾಯಿ ಮಗುವಿನ ಸಂರಕ್ಷಣೆಯ ವಿಶಿಷ್ಟ ಜವಾಬ್ದಾರಿಯನ್ನು ಹೊತ್ತಿರುವ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಈ ಮಹಿಳೆಯ ಪ್ರಾಣ ರಕ್ಷಣೆಯನ್ನು ಮಾಡುವ ವೈದ್ಯಕೀಯ ಲೋಕದ ಈ ಸವಾಲನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತದೆ. ಆ ಮೂಲಕ ನಿಯಮಿತವಾಗಿ ಗರ್ಭಿಣಿ ಪರೀಕ್ಷೆಯನ್ನು ಸರಕಾರಿ ಲೇಡೀಗೋಶನ್ ಆಸ್ಪತ್ರೆಯಲ್ಲಿ ನಡೆಸಿಕೊಡಲಾಗುತ್ತದೆ. ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್ ವೆನ್ಲಾಕ್ ಬ್ಲಡ್ ಬ್ಯಾಂಕ್‍ನ ನಿರಂತರ ಸಂಪರ್ಕದಲ್ಲಿದ್ದು, ಆರೋಗ್ಯ ಇಲಾಖೆಯ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳವರ ಬೆಂಬಲ ಮತ್ತು ಅನುಮತಿಯನ್ನು ಡಾ.ಶರತ್ ಅವರ ಮುಖಾಂತರ ಪಡೆದು ಸರಕಾರದ ವತಿಯಿಂದ ಈ ಮಹಿಳೆಗೆ ವಾರಕ್ಕೆ ಒಂದಾವರ್ತಿ ಅಗತ್ಯತೆಯ ಈ ಇಂಜೆಕ್ಷನ್ ನೀಡುವ ವ್ಯವಸ್ಥೆಯನ್ನು ಗರ್ಭಾವಸ್ಥೆಯ ಪೂರ್ಣ ಅವಧಿಯವರೆಗೂ ನಿರ್ವಹಿಸುವ ಕ್ರಮ ಹಾಗೂ ವಿಧಾನಗಳನ್ನು ನೆರವೇರಿಸಿ ಕೊಡಲಾಗುತ್ತದೆ. ನಿರಂತರವಾದ ಆರೈಕೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದು ಆಕೆಯ ನಿರೀಕ್ಷಿತ ಹೆರಿಗೆ ದಿನಾಂಕಕ್ಕೆ ಸರಿಯಾಗಿ ಇಪ್ಪತ್ತು ದಿನಗಳ ಮುಂಚಿತವಾಗಿ ದಾಖಲು ಮಾಡಿಕೊಳ್ಳಲಾಗುತ್ತದೆ. ಸದ್ರಿ ಫ್ಯಾಕ್ಟರ್ ಗಿ III (8) ಇಂಜೆಕ್ಷನ್‍ಗಳ ಪೂರೈಕೆಯನ್ನು ಖಾತ್ರಿಪಡಿಸಿಕೊಂಡು ಸರ್ವ ವ್ಯವಸ್ಥೆ ಮತ್ತು ಸಿದ್ಧತೆಗಳೊಂದಿಗೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ನಡೆಸಿಕೊಡಲಾಗಿದೆ. ತಾಯಿ ಮಗುವಿಗೆ ಪುನರ್ಜನ್ಮದ ನವಚೈತನ್ಯದ ಬಾಳನ್ನು ಸರಕಾರಿ ವ್ಯವಸ್ಥೆಯಲ್ಲಿ ನೀಡಲಾಗಿರುವುದು ಎಲ್ಲರೂ ಹೆಮ್ಮೆ ಪಡುವ ವಿಚಾರ.
ಸಂಪೂರ್ಣ ಗರ್ಭಿಣಿ ಆರೈಕೆಯ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಯುಳ್ಳ 25000 ಯೂನಿಟ್ ಅಪರೂಪದ ಈ ಇಂಜೆಕ್ಷನ್‍ನ್ನು ಸರ್ಕಾರದ ವತಿಯಿಂದ ನೀಡಲಾಗಿರುವುದು ಉಲ್ಲೇಖನೀಯ ಅಂಶ.
ಕೆ.ಎಂ.ಸಿ.ಯ ತಜ್ಞ ವೈದ್ಯರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ.ಅನುಪಮಾ ರಾವ್, ಡಾ.ಸಿರಿಗಣೇಶ್, ಡಾ.ನಮಿತಾ ಅಲ್ಲದೇ ಅರಿವಳಿಕೆ ತಜ್ಞರುಗಳಾದ ಡಾ.ಸುಮೇಶ್ ರಾವ್, ಡಾ.ರಂಜನ್ ಹಾಗೂ ಲೇಡಿಗೋಷನ್ ಶುಶ್ರೂಷಕ ವೃಂದದ ಸೇವೆ ಸ್ಮರಣೀಯ.
ಪ್ರಸವೋತ್ತರವಾಗಿ ಸುಮಾರು ಹತ್ತು ದಿವಸಗಳ ಆಸ್ಪತ್ರೆ ಆರೈಕೆಯ ಬಳಿಕ ಸುಖಕರವಾಗಿ ಮನೆ ಸೇರಿದ ಈ ಮಹಿಳೆ ಸಂತಸದ ಅಶ್ರುಧಾರೆಯ ಮೂಲಕ ಲೇಡಿಗೋಷನ್ ಆಸ್ಪತ್ರೆ ಮತ್ತು ಉತ್ಕøಷ್ಟ ಸರಕಾರಿ ವ್ಯವಸ್ಥೆಗೆ ಕೃತಜ್ಞತೆ ಸಲ್ಲಿಸಿರುವುದು ಗುಣಮಟ್ಟದ ತಾಯಿ ಮಗುವಿನ ಆರೋಗ್ಯ ಸೇವೆಗೆ ಹಿಡಿದ ಕೈಗನ್ನಡಿ ಎಂದು ಲೇಡಿಗೋಷನ್ ಅಧೀಕ್ಷಕರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles