ಮಂಗಳೂರು: ಮಂಗಳೂರಿನಲ್ಲಿ ಸಂಪ್ರದಾಯಿಕ ಮರಳುಗಾರಿಕೆ ನಿಲ್ಲಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ 7 ಮಂದಿ ತಜ್ಞರ ವರದಿಯನ್ನು ತಯಾರಿಸಿ ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಲಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರತ್ಯೇಕ ಮರಳು ನೀತಿಯನ್ನು ಜಾರಿ ಮಾಡುವುದಾಗಿ ಹೇಳಿದ್ದರೂ ಇಲ್ಲಿಯವರೆಗೆ ಆ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಮರಳುಗಾರಿಕೆಯನ್ನೇ ನಂಬಿರುವ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಮರಳನ್ನು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ದುಪ್ಪಟ್ಟು ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಒದಗಿದೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಕದ್ರಿಪಾರ್ಕ್ ಹೊರಗಡೆ ಇರುವ ಅಂಗಡಿ ಮಳಿಗೆಗಳನ್ನು ಇನ್ನೂ ತೆರೆಯಲಾಗಿಲ್ಲ. ಇದಕ್ಕಾಗಿ ಟೆಂಡರ್ ಕರೆದಿಲ್ಲ. ನಾವು ಸ್ಮಾರ್ಟ್ ಸಿಟಿಯಲ್ಲಿ ನಿರ್ಮಾಣ ಮಾಡಿರುವ ಪಾರ್ಕ್ ನಲ್ಲಿ ಎರಡು ತಿಂಗಳು ಕಳೆದರೂ ಅಂಗಡಿ ಮಳಿಗೆಗಳಿಗೆ ಯಾಕೆ ಟೆಂಡರ್ ಕರೆದಿಲ್ಲ? ಇಲ್ಲಿ ಕಾಂಗ್ರೆಸಿಗರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತ, ಹಿತೈಷಿಗಳಿಗೆ ಈ ಅಂಗಡಿಗಳನ್ನು ನೀಡಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದು ಅದಕ್ಕಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ” ಎಂದು ಕಾಮತ್ ಕಿಡಿಕಾರಿದರು.
“ಅಲ್ಪಸಂಖ್ಯಾತರಿಂದಲೇ ಆರಿಸಿ ಬಂದಿರುವ ಸರಕಾರ ಇಂದು ಅಲ್ಪಸಂಖ್ಯಾತರಿಗೆ ಅನ್ಯಾಯ ಎಸಗುತ್ತಿದೆ. ದಲಿತರಿಗೆ, ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿರುವ ಸರಕಾರ ಏನಾದರೂ ಇದ್ದರೆ ಅದು ಕಾಂಗ್ರೆಸ್ ಸರಕಾರ. ಪರಿಶಿಷ್ಟ ಜಾತಿ ಪಂಗಡದ ಹಾಗೂ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದಲ್ಲೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಅಲ್ಪಸಂಖ್ಯಾತರ ಶ್ರಮಶಕ್ತಿ ಲೋನ್ ಸ್ಕೀಮ್ ಗೆ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ 1728 ಅರ್ಜಿಗಳು ಬಂದಿದ್ದು ಅದರಲ್ಲಿ ಕೇವಲ 8 ಮಂದಿಗೆ ಮಾತ್ರ ಯೋಜನೆ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ 8 ತಿಂಗಳಿಂದ ಕಾಂಗ್ರೆಸ್ ಸರಕಾರ ಬಂದ ಬಳಿಕ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಬಾಕಿಯಾಗಿದೆ.
ಹಿಂದಿನ ಸರಕಾರ ಜಾರಿಗೆ ತಂದಿದ್ದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಡೆಯೊಡ್ಡುವ ಮೂಲಕ ಜನರಿಗೆ ಸಂಕಷ್ಟ ಎದುರಾಗಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇನ್ನಾದರೂ ಅನುದಾನ ಬಿಡುಗಡೆಗೊಳಿಸಿ. ರಸ್ತೆ, ಚರಂಡಿ, ಕುಡಿಯುವ ನೀರು ಇತ್ಯಾದಿ ಕಾಮಗಾರಿ ಅರ್ಧಕ್ಕೇ ಬಾಕಿಯಾಗಿದ್ದು ಕಾಂಗ್ರೆಸ್ ಸರಕಾರ ಜನರ ಹಿತದೃಷ್ಟಿಯಿಂದ ಎಲ್ಲಾ ಕಾಮಗಾರಿಗಳನ್ನು ಪುನರ್ ಆರಂಭ ಮಾಡಲು ಅನುದಾನ ಬಿಡುಗಡೆಗೊಳಿಸಬೇಕು” ಎಂದು ವೇದವ್ಯಾಸ ಕಾಮತ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೂಪಾ ಡಿ. ಬಂಗೇರ, ಸುರೇಂದ್ರ, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಹೆಗ್ಡೆ, ಅಜಯ್ ಮತ್ತಿತರರು ಉಪಸ್ಥಿತರಿದ್ದರು.