ಮಂಗಳೂರು: ಭಾರತ ಉನ್ನತ ಮಟ್ಟದ ವಿದೇಶಿ ಸಂಬಂಧ, ಆರ್ಥಿಕತೆ ಸೇರಿದಂತೆ ಮೊದಲಾದ ಸಾಕಷ್ಟು ವಿಷಯಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಆದರೆ ನೈರ್ಮಲ್ಯದಂತಹ ಸಾಮಾಜಿಕ ಅಭಿವೃದ್ಧಿ ವಿಷಯಗಳಲ್ಲಿ ಇನ್ನೂ ಸಾಕಷ್ಟುಉಪಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಬೆಂಗಳೂರಿನ ಐ.ಎಸ್.ಇ.ಸಿ. ಸಂಸ್ಥೆಯ ಸಮಾಜಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಜಿ. ಕೆ. ಕಾರಂತ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯ, ಸಮಾಜಶಾಸ್ತ್ರ ಸ್ನಾತಕೋತ್ತರ ಮತ್ತು ಸಂಶೋಧನಾ ಅಧ್ಯಯನ ಕೇಂದ್ರ, ಸಮಾಜಶಾಸ್ತ್ರ ವಿಭಾಗ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಸುಲಬ್ ಅಂತಾರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆ ನವದೆಹಲಿ ಹಾಗೂ ಮಂಗಳೂರು ಸಮಾಜಶಾಸ್ತ್ರ ಸಂಘ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಿಂದುಳಿದ ವರ್ಗ, ನೈರ್ಮಲ್ಯೀಕರಣ ಮತ್ತು ಸಾಮಾಜಿಕ ಅಭಿವೃದ್ಧಿ ವಿಷಯದ ಕುರಿತು ನಗರದ ವಿಶ್ವವಿದ್ಯಾನಿಲಯ
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು
ನಮ್ಮ ಜೀವನ ಶೈಲಿಯನ್ನು ಉನ್ನತೀಕರಿಸಲು ಸಾಕಷ್ಟು ತಂತ್ರಜ್ಞಾನಗಳಿವೆ.. ಆದರೆ ಮನೆಯ ಶೌಚಾಲಯದ ಪರಿಸ್ಥಿತಿ ಕೆಟ್ಟರೆ ಅದನ್ನು ಸುಧಾರಿಸಲು ಯಾವುದೇ ತಂತ್ರಜ್ಞಾನದ ಬಳಕೆ ನಮಗೆ ತಿಳಿದಿಲ್ಲ. ಇದರ ಜೊತೆಗೆ ತ್ಯಾಜ್ಯ ನಿರ್ವಹಣೆ,ಸ್ವಚ್ಛತೆ ಮೊದಲಾದ ನೈರ್ಮಲ್ಯೀಕರಣದ ವಿಷಯದಲ್ಲಿ ಸಾಕಷ್ಟು ಹಿಂದೆ ಉಳಿದಿದ್ದೇವೆ. ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಯರಾಜ್ ಅಮೀನ್ ಸಾಮಾಜಿಕ ಅಭಿವೃದ್ಧಿ ಎನ್ನುವುದು ಒಂದು ಪ್ರಕ್ರಿಯೆ. ಇದು ಸಮಾಜದ ಎಲ್ಲಾ ಸ್ತರಗಳಲ್ಲಿ ಆಗಬೇಕು. ಕೇವಲ ಆರ್ಥಿಕವಾಗಿ ಬೆಳೆದರೆ ಅಭಿವೃದ್ಧಿ ಎಂದು ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ಸಾಮಾಜಿಕವಾಗಿಯೂ ಬದಲಾವಣೆಗಳಾದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ. ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆ, ಸಾಮಾಜಿಕ ಬದುಕಿನಲ್ಲಿರುವ ಪೂರ್ವಗ್ರಹಗಳಿಂದಾಗಿ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಮಾತನಾಡಿ, ನಾವು ಸ್ವತಂತ್ರ ಭಾರತದ ಅಮೃತ ಮಹೋತ್ಸವವನ್ನು ಕಳೆದ ವರ್ಷವಷ್ಟೇ ಆಚರಿಸಿದ್ದೇವೆ. ಆದರೆ ಅಸ್ಪೃಶ್ಯತೆ, ಅಸಮಾನತೆ ಮೊದಲಾದ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಲು ಇನ್ನೂ ಕೂಡ ಸಾಧ್ಯವಾಗಿಲ್ಲ ಎಂಬುದು ನೋವಿನ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕ ಡಾ. ರಿಚರ್ಡ್ ಪಾಯಿಸ್ ಅವರ ʼಬಿಂದೇಶ್ವರ ಪಾಠಕ್ʼ, ʼಸಾನಿಟೇಶನ್ ಗುರುʼ ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಇತ್ತೀಚೆಗೆ ನಿಧನ ಹೊಂದಿದ ಸುಲಭ ಶೌಚಾಲಯ ನಿರ್ಮಾಣದ ರೂವಾರಿ ಎಂದೇ ಖ್ಯಾತವಾಗಿರುವ ಡಾ. ಬಿಂದೇಶ್ವರ್ ಪಾಠಕ್ ಅವರಿಗೆ ಪುಷ್ಪ ನಮನ ಅರ್ಪಿಸಿ, ನೈರ್ಮಲ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ವಿಚಾರ ಸಂಕಿರಣದ ಸಂಘಟನಾಕಾರ್ಯದರ್ಶಿ ಡಾ. ಗಾಯತ್ರಿ ಎನ್. ಅವರು ಸ್ಮರಿಸಿದರು.
ಈ ವಿಚಾರ ಸಂಕಿರಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿನಯ್ರಜತ್, ಮಂಗಳೂರು ಸಮಾಜಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ. ಯೋಗೀಂದ್ರ ಬಿ. ಹಾಗೂ ಸಮಾಜಶಾಸ್ತ್ರ ವಿಭಾಗದ ನಾನಾ
ಕಾಲೇಜಿನ ಉಪನ್ಯಾಸಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.