ಮಂಗಳೂರು:ನ್ಯಾಯಲಯಕ್ಕೆ ಹಾಜರಾಗದೆ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸರು ಬ೦ಧಿಸಿದ್ದಾರೆ.ಬೆಳ್ತಂಗಡಿ ತಾಲೂಕು ತೋಟತ್ತಡಿ ನಿವಾಸಿ ಟಿ.ಇ. ಜೋಸೆಫ್ (58 ) ಬ೦ಧಿತ ಆರೋಪಿ.
ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದಾಖಲಾದ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಟಿ.ಇ. ಜೋಸೆಫ್ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನು ಪ್ರಕರಣದ ವಿಚಾರಣೆಗೆ ನ್ಯಾಯಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಈತನ ವಿರುದ್ದ ನ್ಯಾಯಾಲಯವು ದಸ್ತಗಿರಿ ವಾರೆಂಟನ್ನು ಹೊರಡಿಸಿತ್ತು.
ಈತನ ಬಂಧನಕ್ಕೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಎ.ಎಸ್.ಐ ಆಶೋಕ್ ಹೆಚ್.ಸಿ, ವಿಜಯ ಸುವರ್ಣ, ಹೆಚ್.ಸಿ ಲೋಕೇಶ್ ಹಾಗೂ ಇತರ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು. ಆರೋಪಿ ಟಿ.ಇ. ಜೋಸೆಫ್, ಕೇರಳದ ತ್ರಿಶೂರ್ ಜಿಲ್ಲ್ಲೆಯ ಪುತ್ತುಕ್ಕಾಡ್ ಗ್ರಾಮದಲ್ಲಿರುವ ಬಗ್ಗೆ ವಿವಿಧ ಅಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಯ ಇರುವಿಕೆಯನ್ನು ಖಚಿತಪಡಿಸಿಕೊಂಡು ಫೆಬ್ರವರಿ 22 ರಂದು ತ್ರಿಶೂರ್ ಜಿಲ್ಲ್ಲೆಯಲ್ಲಿ ವಶಕ್ಕೆ ಪಡೆಯಲಾಯಿತು. ಆರೋಪಿಯನ್ನು ಮಂಗಳೂರಿನ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.